Oct 4, 2013

ಅಕ್ರಮದ ಅದಿರಿನಲ್ಲಿ ಸರ್ವರದೂ ಸಮಪಾಲು



 ಡಾ ಅಶೋಕ್ ಕೆ ಆರ್
ಅತ್ತ ಕಡೆ ಚೀನಾ ಒಂದೊಂದೆ ಹೆಜ್ಜೆ ಭಾರತದೆಡೆಗೆ ಇಟ್ಟಾಗಲೂ ಅವರ ಮರಾಮೋಸದ ಬಗ್ಗೆ, ನಮ್ಮ ನೆಲವನ್ನು ಕಬಳಿಸಬಯಸುವ ಅವರ ಆಕ್ರಮಣಕಾರಿ ನಡಾವಳಿಯ ಬಗ್ಗೆ ನಮ್ಮಲ್ಲಿ ಹತ್ತಾರು ರೀತಿಯ ಚರ್ಚೆಗಳು ಪ್ರಾರಂಭವಾಗಿಬಿಡುತ್ತದೆ. ಅದೇ ಸಮಯದಲ್ಲಿ ಇತ್ತ ಕಡೆ ನಮ್ಮದೇ ದೇಶದ ಜನತೆ ನಮ್ಮದೇ ದೇಶದ ಭೂಮಿಯನ್ನು ಅಗೆದು ಬರಿದು ಮಾಡಿ ಚೀನಾದಂತಹ ದೇಶಗಳಿಗೇ ರಫ್ತು ಮಾಡಿಬಿಡುತ್ತಾರೆ! ಚೀನಾದವರಿಗಿಂದ ನಾವು ಈ ದೇಶಕ್ಕೆ ಹೆಚ್ಚು ಮೋಸ ಮಾಡಿದ್ದೇವೆ ಎಂದು ಮೆರೆಯುತ್ತಿದ್ದ ಜನರಲ್ಲಿ ಕೆಲವರು “ಜನಾನುರಾಗಿಯಾಗಿ”(?) ಮತ್ತೆ ಮತ್ತೆ ಶಾಸಕ ಸ್ಥಾನ ಅಲಂಕರಿಸಿದ್ದಾರೆ. ಸಚಿವರಾದವರೂ ಇದ್ದಾರೆ! 2008, 2011ರ ಜುಲೈನಲ್ಲಿ ವರದಿ ನೀಡಿದ ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತದ 2008ರ ವರದಿಯ ನಂತರ ಅಕ್ರಮ ಗಣಿಗಾರಿಕೆಯ ಕುರಿತು ಸುಪ್ರೀಂಕೋರ್ಟಿಗೆ ವರದಿ ನೀಡಿದ ಸಿಇಸಿ; ಇವೆಲ್ಲದರ ಸಹಾಯದಿಂದ ಮತ್ತಷ್ಟು ತನಿಖೆ ನಡೆಸಿದ ಸಿ.ಬಿ.ಐ ಗಣಿ ಹಗರಣದ ಪ್ರಮುಖ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಿಸುತ್ತ, ವಿಚಾರಣೆಗೊಳಪಡಿಸುತ್ತ ಕೆಲವು ಆರೋಪಿಗಳನ್ನು ಜೈಲಿಗೂ ಅಟ್ಟುತ್ತಿದ್ದಾರೆ. ಮಣ್ಣು ಬಗೆದು ದೇಶಕ್ಕೇ ದ್ರೋಹ ಬಗೆದವರು ಜೈಲು ಸೇರುತ್ತಿರುವುದು ಸಂತಸದ ಸಂಗತಿ. 

‘ಭೂಮಿ ಚಿನ್ನ’ ಎಂಬ ಮಾತಿದೆ, ಭೂಮಿ ತನ್ನೆಲ್ಲ ನಿವಾಸಿಗಳಿಗೆ ಆಹಾರ ಬೆಳೆದು ಕೊಡುವ ಕಾರಣಕ್ಕೆ ಹೇಳುತ್ತಿದ್ದ ಈ ಮಾತು ಗಣಿಯ ಆರಂಭದಿಂದ ಹೊಸತೊಂದೇ ಅರ್ಥ ಪಡೆಯಿತು. ಗಣಿ ಅಕ್ರಮ ಹೆಚ್ಚಾಗಿ ನಡೆದಿರುವುದು ಕಬ್ಬಿಣದ ಅದಿರಿನಲ್ಲಿ. ಕಬ್ಬಿಣದ ಅದಿರಿನ ಗಣಿಗಾರಿಕೆ ಕೂಡ ದೇಶಕ್ಕೆ ಅಥವಾ ಕರ್ನಾಟಕ ರಾಜ್ಯಕ್ಕೆ ಹೊಸತಲ್ಲ. ಸ್ವಾತಂತ್ರ್ಯಪೂರ್ವದಲ್ಲೇ ಕುದುರೆಮುಖದಲ್ಲಿ ಬ್ರಿಟೀಷರಿಂದ ಗಣಿಗಾರಿಕೆ ಪ್ರಾರಂಭವಾಗಿತ್ತು. ಬ್ರಿಟೀಷರ ಉದ್ದೇಶವೇ ಭಾರತದ ಲೂಟಿಯಾಗಿದ್ದ ಕಾರಣ ಕಡಿಮೆ ಬೆಲೆಗೆ ತಮ್ಮ ದೇಶಕ್ಕೆ ಸಾಗಿಸಿಕೊಂಡರು, ಅವಶ್ಯಕ ವಸ್ತುಗಳನ್ನು ತಯಾರಿಸಿಕೊಂಡರು. ತಯಾರಿಸಿದ ವಸ್ತುಗಳನ್ನು ಮತ್ತೆ ಭಾರತದಂತಹ ವಸಾಹತುಶಾಯಿ ದೇಶಕ್ಕೆ ತಂದು ಅತಿ ಹೆಚ್ಚು ಲಾಭಕ್ಕೆ ಮಾರಿ ಮತ್ತಷ್ಟು ಹಣ ದೋಚಿಕೊಂಡರು. ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದಲ್ಲಿದ್ದ ಕುದುರೆಮುಖ ಗಣಿ ಪ್ರಕೃತಿಯ ಮೇಲೆ ಕೊಟ್ಟ ಹೊಡೆತ ಅಪಾರ, ಈ ಕಾರಣದಿಂದ 2006ರ ಹೊತ್ತಿಗೆ ಕುದುರೆಮುಖದಲ್ಲಿ ಎಲ್ಲ ರೀತಿಯ ಗಣಿಗಾರಿಕೆಯೂ ನಿಂತು ಹೋಯಿತು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1956ರಿಂದಲೇ ಸಣ್ಣ ಪ್ರಮಾಣದ ಗಣಿಗಾರಿಕೆ ಶುರುವಾಗಿತ್ತಾದರೂ ಅಕ್ರಮ ಗಣಿಗಾರಿಕೆಯ ನೆಪದಲ್ಲಿ ಲಕ್ಷಾಂತರ ಟನ್ ಭೂಮಿ ನಾಶವಾಗಿದ್ದಕ್ಕೂ ಪರೋಕ್ಷವಾಗಿ ಚೀನಾ ದೇಶವೇ ಕಾರಣ!!

ಚೈನಾಬೂಮ್

ಕರ್ನಾಟಕದಲ್ಲಿ ಕಬ್ಬಿಣದ ಅದಿರು ಹೆಚ್ಚಾಗಿ ಲಭ್ಯವಿದ್ದಿದ್ದು ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ. ಈ ಮೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಗಣಿಗಾರಿಕೆ ನಡೆದಿದ್ದು ಬಳ್ಳಾರಿ ಜಿಲ್ಲೆಯಲ್ಲಿ. 2005ರಿಂದೀಚೆಗೆ ವೇಗ ಪಡೆದುಕೊಂಡಿದ್ದ ಗಣಿಗಾರಿಕೆ ಪರಾಕಾಷ್ಟೆ ತಲುಪಿದ್ದು ತನ್ನಲ್ಲಿ ಆಯೋಜಿಸಲಾಗಿದ್ದ ಒಲಂಪಿಕ್ಸಿಗೆ ಚೀನಾ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲಾರಂಭಿಸಿದಾಗ. ಅತ್ಯದ್ಬುತವೆನ್ನಿಸುವ ಕ್ರೀಡಾಂಗಣಗಳನ್ನು, ಐಶಾರಾಮಿ ಕಟ್ಟಡಗಳನ್ನು ನಿರ್ಮಿಸಿ ಇಡೀ ಜಗತ್ತಿನೆದುರಿಗೆ ತನ್ನ ಸಾಮರ್ಥ್ಯವನ್ನು ತೋರಬಯಸಿದ ಚೀನಾಗೆ ಆ ಕಟ್ಟಡಗಳ ನಿರ್ಮಿತಿಗಾಗಿ ಅಪಾರ ಪ್ರಮಾಣದ ಕಬ್ಬಿಣದ ಅವಶ್ಯಕತೆಯಿತ್ತು. ಅತಿ ಕಡಿಮೆ ಬೆಲೆಗೆ ಅದಿರು ಮಾರಲು ಸಿದ್ಧರಿರುವ ಪಡೆಯೇ ಕರ್ನಾಟಕದಲ್ಲಿ ಸಿದ್ಧವಾಗಿತ್ತು. ಬಂದರುಗಳಿಂದ ಚೀನಾಕ್ಕೆ ಅಪಾರ ಪ್ರಮಾಣದ ಅದಿರು ರಫ್ತಾಗಿಯೇ ಬಿಟ್ಟಿತು. ಅನೇಕರು ಕರೋಡಪತಿಗಳಾದರು. ಬಡವಾಗಿದ್ದು ದೇಶ ಪರಿಸರ ಮತ್ತು ಗಣಿಗಾರಿಕೆ ನಡೆದ ಮತ್ತು ಅದಿರನ್ನು ಸಾಗಿಸಿದ ಹಾದಿಯ ಜನರ ಆರೋಗ್ಯ ಸ್ಥಿತಿ.

ನಮ್ಮ ಆಧುನಿಕ ಭಾಷೆಯ ಅಭಿವೃದ್ಧಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಕಬ್ಬಿಣದ ಅವಶ್ಯಕತೆಯಿದೆ, ಗಣಿಗಾರಿಕೆ ಮಾಡಿಯಷ್ಟೇ ಅದಿರನ್ನು ಹೊರತೆಗೆಯಲು ಸಾಧ್ಯ. ಗಣಿಗಾರಿಕೆ ಸಂಪೂರ್ಣವಾಗಿ ನಿಲ್ಲಿಸಿಯೇಬಿಡುವುದು ಭೂತಳದಲ್ಲಿ ಅದಿರು ಇರುವವರೆಗೂ ಅಸಾಧ್ಯದ ಸಂಗತಿ. ಆದರೆ ಎಲ್ಲ ನೀತಿ ನಿಯಮಗಳನ್ನೂ ತೂರಿ ನಡೆಸಿದ ಗಣಿಗಾರಿಕೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿ ಬಳ್ಳಾರಿಯಿಂದ ಮಂಗಳೂರಿನ ವಿವಿಧ ಬಂದರುಗಳ ತನಕ ಬರುವ ಊರುಗಳೆಲ್ಲದರ ಪರಿಸರವನ್ನು ಹಾಳು ಮಾಡಿದೆ. ಪಶ್ಚಿಮಘಟ್ಟದ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ ಬ್ರಿಟೀಷರು ಸಹಿತ ಈ ಮಟ್ಟಿಗೆ ಪರಿಸರವನ್ನು ಹಾಳುಮಾಡಿರಲಿಲ್ಲವೆನ್ನಿಸುತ್ತದೆ. ದಿಡೀರ್ ದುಡ್ಡು ಮಾಡುವ ಹಂಬಲ, ಮಾಡಿದ ದುಡ್ಡನ್ನು ಮನಬಂದಂತೆ ಚೆಲ್ಲಿ ಅಧಿಕಾರ ಪಡೆಯುವ ಕಪಟತನ, ಅಧಿಕಾರ ಪಡೆದ ಮೇಲೆ ನಮ್ಮನ್ನು ತಡೆದು ಹಣಿಯುವವರಾರು ಎಂಬ ಹುಂಬತನದಲ್ಲಿದ್ದವರೆಲ್ಲ ಇಂದು ಜೈಲಿನ ಕಂಬಿಯ ಹಿಂದಿದ್ದಾರೆ. ಕೆಲವರು ಜೈಲು ಸೇರುವ ಭೀತಿಯಿಂದ ಫಾರಿನ್ ಆಸ್ಪತ್ರೆಗಳಲ್ಲಿ “ಚಿಕಿತ್ಸೆ” ಪಡೆಯುತ್ತಿದ್ದಾರೆ!

ಖಾಸಗಿ ಕಂಪನಿಗಳು ಮಾತ್ರ ಅಕ್ರಮ ಮಾಡಿದ್ದಾವೆ, ಎಲ್ಲ ಗಣಿಗಳನ್ನೂ ಸರಕಾರದ ವಶಕ್ಕೆ ಪಡೆದುಕೊಳ್ಳಬೇಕೆಂಬ ಭಾವನೆ ಮೂಡುತ್ತದೆ. ಆದರೆ ಲೋಕಾಯುಕ್ತ ವರದಿ ತಿಳಿಸುವಂತೆ ಸರಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ ಕೂಡ ಗಣಿ ಅಕ್ರಮದಲ್ಲಿ ಪಾಲು ಹೊಂದಿದೆ. ಇತರರಿಗೆ ಕಂಟ್ರ್ಯಾಕ್ಟ್ ನೀಡುವುದರಲ್ಲಿ ಅಕ್ರಮ ನಡೆಸುವುದರ ಜೊತೆಗೆ ಅನುಮತಿ ಪಡೆಯದ ಜಾಗದಲ್ಲೂ ಗಣಿಗಾರಿಕೆ ನಡೆಸಿದೆ ಸರಕಾರಿ ಸ್ವಾಮ್ಯದ ಕಂಪನಿ. 2009ರಲ್ಲಿ ಸಮಾಜ ಪರಿವರ್ತನಾ ಸಮುದಾಯ ಮತ್ತು ಇನ್ನು ಕೆಲವು ಸಂಘಟನೆಗಳು ಈ ಅಕ್ರಮ ಗಣಿಗಾರಿಕೆಯ ವಿರುದ್ಧ ಪರಿಸರದ ಪರ ಸುಪ್ರೀಂಕೋರ್ಟಿಗೆ ಮೊರೆ ಹೋಗುತ್ತವೆ. ಸುಪ್ರೀಂಕೋರ್ಟಿನ ನಿರ್ದೇಶನದಂತೆ ಕೇಂದ್ರ ಉನ್ನತಾಧಿಕಾರಿ ಸಮಿತಿ (ಸಿ.ಇ.ಸಿ) ತನಿಖಾ ತಂಡ ರಚಿಸಿ ಬಳ್ಳಾರಿಯ 117, ಚಿತ್ರದುರ್ಗದ 24 ಮತ್ತು ತುಮಕೂರಿನ 25 ಗಣಿ ಪರವಾನಗಿಯನ್ನು ಪರಿಶೀಲಿಸಿ ಸರ್ವೆ ಮಾಡಿಸುತ್ತದೆ. ಬಳ್ಳಾರಿಯಲ್ಲಿ 117 ಪರವಾನಗಿಯಲ್ಲಿ 83 ಕಂಪನಿಗಳು ಗಣಿ ಅಕ್ರಮದಲ್ಲಿ ತೊಡಗಿದ್ದರೆ, ಚಿತ್ರದುರ್ಗದ 16 (24ರಲ್ಲಿ) ಮತ್ತು ತುಮಕೂರಿನ 24 (25ರಲ್ಲಿ!) ಕಂಪನಿಗಳು ಗಣಿ ಅಕ್ರಮದಲ್ಲಿ ತೊಡಗಿದ್ದವು. ಅಲ್ಲಿಗೆ ಸಿ.ಇ.ಸಿ ಪರಿಶೀಲಿಸಿದ 166 ಗಣಿ ಕಂಪನಿಗಳಲ್ಲಿ 123 ಕಂಪನಿಗಳು ಅಕ್ರಮದಲ್ಲಿ ತೊಡಗಿದ್ದವು.

ಅಕ್ರಮಕ್ಕೆ ನೂರಾರು ಅಪ್ಪಂದಿರು

ಗಣಿ ಅಕ್ರಮ ನಡೆಯುವುದಾದರೂ ಹೇಗೆ? ಒಂದು ಗಣಿಯನ್ನು ಆರಂಭಿಸಬೇಕೆಂದರೆ ಸರಕಾರದ ಅನುಮತಿ ಬೇಕು. ಒಂದು ತಿಂಗಳಿಗೆ ಒಂದು ವರುಷಕ್ಕೆ ನೀನು ಇಷ್ಟು ಪ್ರಮಾಣದ ಅದಿರನ್ನು ಹೊರತೆಗೆಯಬಹುದು ಎಂದು ತಿಳಿಸುತ್ತದೆ ಸರಕಾರ. ಕಡಿಮೆ ಬೇಕಾದರೂ ಅಗಿ ಆದರೆ ಹೆಚ್ಚು ಪ್ರಮಾಣವನ್ನು ಭೂಮಿಯಿಂದ ಹೊರತೆಗೆಯುವಂತಿಲ್ಲ ಎಂದು ನಿರ್ದೇಶಿಸುತ್ತದೆ. ಖಾಸಗಿ ವ್ಯಕ್ತಿಗಳಿಗೆ ಸೇರಿದ ಪಟ್ಟಾ ಭೂಮಿಯಲ್ಲೂ ಕೂಡ ಗಣಿಗಾರಿಕೆ ಮಾಡಬಹುದಾದರೂ ಅದಕ್ಕೂ ಸರಕಾರದಿಂದ ಪರವಾನಗಿ ಪಡೆಯಬೇಕು, ಉಳಿದ ಗಣಿಗಳಿಗೆ ಯಾವ್ಯಾವ ನಿಯಮಗಳು ಅನ್ವಯಿಸುತ್ತವೆಯೋ ಅದೇ ನಿಯಮಗಳು ಪಟ್ಟಾ ಭೂಮಿಗೂ ಅನ್ವಯಿಸುತ್ತದೆ. ನನ್ನದೇ ಭೂಮಿ ನನ್ನಿಷ್ಟ ಬಂದಷ್ಟು ಬಗೆದು ಬಿಡುತ್ತೇನೆ ಎಂದು ಮಾಲೀಕ ಹೇಳುವಂತಿಲ್ಲ! ಸರಿ, ನಿಗದಿತ ಪ್ರಮಾಣದ ಅದಿರನ್ನು ತೆಗೆದ ನಂತರ ಅದನ್ನು ಸಾಗಿಸುವ ಪ್ರಕ್ರಿಯೆ. ಸಾಗಿಸುವ ಮುನ್ನ ಪ್ರತಿ ಟನ್ ಅದಿರಿಗೆ ಸರಕಾರಕ್ಕೆ ರಾಯಲ್ಟಿ ನೀಡಬೇಕು. ಈ ರಾಯಲ್ಟಿ ಟನ್ನು ಅದಿರಿಗೆ ಇಪ್ಪತ್ತು ರುಪಾಯಿಗಳಿಗಿಂತ ಕಡಿಮೆ ಇರುವುದು ಖಾಸಗಿ ವ್ಯಕ್ತಿ ಮತ್ತು ಕಂಪನಿಗಳಿಗೆ ಎಷ್ಟರ ಮಟ್ಟಿಗೆ ಲಾಭ ಮಾಡಿಕೊಡುತ್ತದೆಂಬುದನ್ನು ಅರಿಯಬಹುದು, ಇರಲಿ. ಅದಿರನ್ನು ದೇಶದೊಳಗಿನ ಮತ್ತೊಂದು ಕಂಪನಿಗೆ ಸಾಗಿಸಲಿ ಅಥವಾ ಹೊರದೇಶಕ್ಕೇ ಸಾಗಿಸಲಿ ಪರವಾನಗಿ ಪಡೆಯಲೇಬೇಕು. ಪರವಾನಗಿ ನೀಡುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಗಣಿ ಅರಣ್ಯ ಪ್ರದೇಶದಲ್ಲಿದ್ದರೆ ಮತ್ತೊಂದು ಪರವಾನಗಿ ನೀಡುವುದು ಅರಣ್ಯ ಇಲಾಖೆ. ಪ್ರತಿ ಲಾರಿಯಲ್ಲಿ ಇಂತಿಷ್ಟೇ ಅದಿರನ್ನು ತುಂಬಬೇಕು ಎಂಬ ನಿಯಮವಿರುತ್ತದೆ. ಅದನ್ನು ಮೀರಿ ಅದಿರು ತುಂಬಿದ್ದರೆ ಅಂಥ ಲಾರಿಗಳನ್ನು ಹಿಡಿದು ದಂಡ ಕಟ್ಟುವಂತೆ ಮಾಡುವುದು ಆರ್ ಟಿ ಓದ ಕೆಲಸ. ಕೊನೆಗೆ ಅದಿರನ್ನು ದೇಶೀಯ ಕಂಪನಿಗಳಿಗಲ್ಲದೆ ವಿದೇಶಕ್ಕೆ ಸಾಗಿಸುತ್ತಿದ್ದರೆ ರಫ್ತು ಮಾಡಲ್ಪಡುವ ಇತರೆ ವಸ್ತುಗಳಿಗೆ ಅನ್ವಯಿಸುವ ನಿಯಮಗಳೇ ಇದಕ್ಕೂ ಅನ್ವಯಿಸುತ್ತದೆ. ಅದಿರು ತೆಗೆಯುವ ಹಂತದಿಂದ ಅದನ್ನು ಸಾಗಿಸುವ ಹಂತದವರೆಗೂ ಇಷ್ಟೆಲ್ಲ ಕಟ್ಟುಪಾಡುಗಳಿದ್ದಾಗ್ಯೂ ಅಕ್ರಮಗಳು ನಡೆದಿವೆಯಂದರೆ ಆ ಅಕ್ರಮದಲ್ಲಿ ಸರಕಾರದ ಎಲ್ಲ ಹಂತದ ಅಧಿಕಾರಿಗಳು, ಸರಕಾರ ನಡೆಸುವ ರಾಜಕಾರಣಿಗಳು ಭಾಗಿಯಾಗಿರಲೇಬೇಕು. ಸಿಬಿಐ ಬಂಧಿಸುತ್ತಿರುವ ವ್ಯಕ್ತಿಗಳನ್ನು ನೋಡಿದರೆ ಈ ಭಾಗವಹಿಸುವಿಕೆ ಖಾತರಿಯಾಗುತ್ತದೆ ಅಷ್ಟೇ.

ಸರಕಾರದಿಂದ ಪರವಾನಗಿ ಪಡೆದುಕೊಳ್ಳುವುದರಲ್ಲಿ ಅಕ್ರಮ ಶುರುವಾಗುತ್ತದೆ. ನಂತರ ತಮಗೆ ಮೀಸಲಿರಿಸಿದ ಪ್ರದೇಶದಾಚೆಗೂ ಗಣಿಗಾರಿಕೆಯನ್ನು ವಿಸ್ತರಿಸಿಕೊಳ್ಳುತ್ತಾರೆ. ಈ ವಿಸ್ತರಣೆ ಯಾವ ಮಟ್ಟದಲ್ಲಿ ನಡೆಯುತ್ತದೆಂದರೆ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಆಂಧ್ರಪ್ರದೇಶದಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದು ಆಂಧ್ರ ಮತ್ತು ಕರ್ನಾಟಕದ ನಡುವಿನ ಗಡಿಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತ ಗಡಿಯನ್ನೇ ಮರೆಯಾಗಿಸಿಬಿಡುತ್ತಾರೆ! ಖಾಸಗಿ ವ್ಯಕ್ತಿಗಳ ಪಟ್ಟಾ ಭೂಮಿಯಲ್ಲಿ ಅನುಮತಿ ಪಡೆಯದೇ ಗಣಿಗಾರಿಕೆ ನಡೆಯುವುದು ಸಾಮಾನ್ಯ. ಪರವಾನಗಿ ಪಡೆದ ಕಂಪನಿಗಳಿಂದ ಸಬ್ ಕಾಂಟ್ರ್ಯಾಕ್ಟ್ ಪಡೆದು ಗಣಿಗಾರಿಕೆ ನಡೆಸುವುದು ಮತ್ತೊಂದು ಅಕ್ರಮದ ರೀತಿ. ಲಾರಿಗಳಲ್ಲಿ ಅಧಿಕ ಪ್ರಮಾಣದ ಅದಿರನ್ನು ಸಾಗಿಸುವುದು ಕೂಡ ಅಕ್ರಮದ ಭಾಗವೇ. ಹೆಚ್ಚು ಅದಿರನ್ನು ಹೊರತೆಗೆದು ಕಡಿಮೆ ಲೆಕ್ಕ ತೋರಿಸಿ ಸರಕಾರಕ್ಕೆ ಕೊಡಬೇಕಿದ್ದ ರಾಯಲ್ಟಿಯನ್ನು (ಅದು ಅತಿ ಕಡಿಮೆಯಾಗಿದ್ದರೂ) ವಂಚಿಸಿದ ಮೊತ್ತವೇ ಸಾವಿರಾರು ಕೋಟಿಗಳ ಲೆಕ್ಕದಲ್ಲಿದೆ. ಹಣದ ರೂಪದ ನಷ್ಟವಲ್ಲದೆ ಪರಿಸರಕ್ಕೆ, ಜನರ ಆರೋಗ್ಯಕ್ಕೆ ಉಂಟಾದ ನಷ್ಟವನ್ನು ಅಂದಾಜಿಸುವುದೇ ಕಷ್ಟದ ಕೆಲಸ. ಬಳ್ಳಾರಿಯಿಂದ ಮಂಗಳೂರಿನ ರಸ್ತೆಯ ಸ್ಥಿತಿಗತಿಯನ್ನು ಗಮನಿಸಿದರೆ ಅಧಿಕ ಅದಿರನ್ನು ಸಾಗಿಸುವುದರಿಂದ ನಾಡಿನ ರಸ್ತೆಯ ಮೇಲೆ ಆಗುವ ಪರಿಣಾಮ ತಿಳಿಯುತ್ತದೆ. ರಸ್ತೆ ಬದಿಯ ಊರುಗಳ ಕಟ್ಟಡಗಳ ಮೇಲೆ, ಗಿಡಮರಗಳ ಮೇಲೆ ಕೊನೆಗೆ ಮನುಷ್ಯರ ಮೇಲೂ ಒಂದು ಪದರ ಗಣಿ ಧೂಳು ಕುಳಿತಿರುವುದನ್ನು ಕಾಣಬಹುದಿತ್ತು. ಬಳ್ಳಾರಿ ಜಿಲ್ಲೆಯ ಪತ್ರಕರ್ತನೊಬ್ಬ ನೀಡಿದ ‘ಅನಧಿಕೃತ’ ಮಾಹಿತಿಯಂತೆ ಗಣಿಗಾರಿಕೆ ಹೆಚ್ಚಿದ್ದ ಸಮಯದಲ್ಲಿ ಆ ಪ್ರದೇಶದಲ್ಲಿ ಆಸ್ತಮಾ ಔಷಧಿಗಳು ಹೆಚ್ಚೆಚ್ಚು ಮಾರಾಟವಾಗುತ್ತಿದ್ದವಂತೆ.

ಇವೆಲ್ಲ ಅಕ್ರಮಗಳಿಗೂ ಕಳಶವಿಟ್ಟಂತ ಪ್ರಕರಣವೆಂದರೆ ಬೇಲೇಕೇರಿ ಅದಿರು ಕಳ್ಳತನ ಪ್ರಕರಣ. ಬಹುಶಃ ಇದು ದೇಶದ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ಕಳ್ಳತನ! ಪ್ರಪಂಚದ ಯಾವ ಜಾದೂಗಾರನೂ ಇಷ್ಟು ಅಪಾರ ಪ್ರಮಾಣದ ವಸ್ತುವನ್ನು ಮಂಗಮಾಯ ಮಾಡಿರುವ ಉದಾಹರಣೆ ಇಲ್ಲವೇನೋ!! ಆರ್. ಗೋಕುಲ್ ಎಂಬ ಅಧಿಕಾರಿ ಹೊರದೇಶಕ್ಕೆ ಸಾಗಿಸಲುದ್ದೇಶಿಸಿದ್ದ ಅಕ್ರಮ ಅದಿರನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಬೇಲೇಕೇರಿ ಬಂದರಿನ ಸಮೀಪ. ಹೈಕೋರ್ಟ್ ಕೂಡ ಆ ಅಕ್ರಮ ಅದಿರನ್ನು ಸಾಗಿಸುವುದಕ್ಕೆ ನಿಷೇಧ ಹೇರುತ್ತದೆ. ಇದ್ದಕಿದ್ದಂತೆ ಅಷ್ಟೂ ಅದಿರು ಬಂದರಿನಿಂದ ನಾಪತ್ತೆಯಾಗಿಬಿಡುತ್ತದೆ! ನಾಪತ್ತೆಯಾಗಿದ್ದು ಒಂದೆರಡು ನೂರು ಕಿಲೋದ ಅದಿರಲ್ಲ, ಬರೋಬ್ಬರಿ ಮೂರುವರೆ ಮೆಟ್ರಿಕ್ ಟನ್ನು ಅದಿರು! ಕರ್ನಾಟಕದ ಅಕ್ರಮ ಗಣಿಗಾರಿಕೆಯಿಂದಲೇ ದೇಶಕ್ಕೆ ಅರವತ್ತು ಸಾವಿರ ಕೋಟಿಗೂ ಅಧಿಕ ಪ್ರಮಾಣದ ಮೊತ್ತ ನಷ್ಟವಾಗಿರಬಹುದೆಂಬ ಅಂದಾಜಿದೆ. ಪರಿಸರ, ಜನರ ಆರೋಗ್ಯದ ಮೇಲಾದ ದುಷ್ಟರಿಣಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಈ ಮೊತ್ತ ದ್ವಿಗುಣಕ್ಕಿಂತಲೂ ಹೆಚ್ಚು.

ದೇಶಕ್ಕೆ ಪರಿಸರಕ್ಕೆ ಪರೋಕ್ಷವಾಗಿ ಅಭಿವೃದ್ಧಿಗೂ ಅಪಾರ ಪ್ರಮಾಣದ ಹೊಡೆತ ಕೊಟ್ಟ ಅಕ್ರಮ ಗಣಿಗಾರಿಕೆಯಿಂದ ದಿಡೀರ್ ಶ್ರೀಮಂತರಾದವರು ಅನೇಕ ಮಂದಿ. ಹಿಂದಿನ ಬಿಜೆಪಿ ಸರಕಾರದಲ್ಲಿದ್ದ ಜನಾರ್ಧನ ರೆಡ್ಡಿ ಈ ಗಣಿ “ದೊರೆ” ಗಳಿಗೆಲ್ಲ ಅಗ್ರಜ! ಕಾಂಗ್ರೆಸ್ಸಿನವರೂ ಗಣಿದುಡ್ಡಿನಲ್ಲಿ ಮುಳುಗೆದ್ದು ಬಂದವರೇ. ಈಗ ಸಚಿವರಾಗಿರುವ ಸಂತೋಷ್ ಲಾಡ್ ಹೆಸರು ಕೂಡ ಗಣಿ ಅಕ್ರಮದಲ್ಲಿ ಕೇಳಿಬಂದು ಗಣಿ ವಿಷಯದಲ್ಲಿ ಸಾಕಷ್ಟು ಹೋರಾಟ ನಡೆಸಿರುವ ಹಿರೇಮಠ್ ಲಾಡ್ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಹಿಂದೊಮ್ಮೆ ಗಣಿಗಾರಿಕೆಯ ವಿಚಾರವಾಗಿ ಬಳ್ಳಾರಿವರೆಗೂ ಪಾದಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿ. ಆದರೆ ಅವರು ಕೂಡ ಸಂತೋಷ್ ಲಾಡ್ ಬೆಂಬಲಕ್ಕೆ ನಿಂತಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಅನೇಕ ಸಂಘಟನೆಗಳ ನಿರಂತರ ಹೋರಾಟ, ನ್ಯಾಯಾಲಯಗಳ ಸೂಕ್ತ ಆದೇಶಗಳಿಂದ ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಮೊದಲು ತನಿಖೆ ಆಂಧ್ರಪ್ರದೇಶಕ್ಕೆ ಸೀಮಿತವಾಗಿ ನಂತರ ಕರ್ನಾಟಕಕ್ಕೂ ವಿಸ್ತರಣೆಗೊಂಡಿತು. ಮಾಜಿ ಮಂತ್ರಿ ಜನಾರ್ಧನ ರೆಡ್ಡಿಯ ಬಂಧನದಿಂದ ಶುರುವಾದ ತನಿಖೆ ಈಗ ಕರ್ನಾಟಕದ ಹಾಲಿ ಶಾಸಕರಾದ ಸುರೇಶ್ ಬಾಬು ಮತ್ತು ಸತೀಶ್ ಸೈಲ್ ಬಂಧನದವರೆಗೂ ವಿಸ್ತರಣೆಗೊಂಡಿದೆ. ಈ ರಾಜಕಾರಣಿಗಳ ಆಪ್ತರಾದ ಕಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್, ಅಲಿ ಖಾನ್, ಕೊವನೂರು ಸೋಮಶೇಖರ್ ಮತ್ತು ಅಧಿಕಾರಿಗಳಾದ ಮುತ್ತಯ್ಯ, ವಿಶ್ವನಾಥ್, ಶಿವಲಿಂಗಮೂರ್ತಿ, ಎಂ.ಕೆ. ಶುಕ್ಲಾ, ಎಸ್.ಪಿ. ರಾಜು ಕೂಡ ಬಂಧಿತರ ಸಾಲು ಸೇರಿದ್ದಾರೆ. ಇನ್ನು ಅನೇಕ ಐ.ಎ.ಎಸ್, ಕೆ.ಎ.ಎಸ್ ಅಧಿಕಾರಿಗಳು ಬಂಧನದ ಭೀತಿ ಎದುರಿಸುತ್ತಿದ್ದಾರೆ. ಬಂಧನದ ಭೀತಿಯಿಂದ ಶಾಸಕ ಆನಂದ್ ಸಿಂಗ್ ಸಿಂಗಪುರಕ್ಕೆ ಹೃದ್ರೋಗದ ಚಿಕಿತ್ಸೆಯ ನೆಪದಲ್ಲಿ ಪರಾರಿಯಾಗಿದ್ದಾರೆ! ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಬೆಂಬಲ ಕೊಟ್ಟ ಇನ್ನು ಅನೇಕ ಪ್ರಭಾವಿಗಳು ತಮ್ಮ ‘ಪ್ರಭಾವ’ದಿಂದ ಹೊರಗಡೆಯೇ ಇದ್ದಾರೆ. ಅವರೂ ತಮ್ಮ ತಂಡದೊಂದಿಗೆ ಆದಷ್ಟು ಬೇಗ ಜೈಲು ಸೇರಲಿ ಎಂಬುದು ನಮ್ಮ ಆರೈಕೆ.
article that was first published in Prajasamara

No comments:

Post a Comment