Oct 28, 2012

ಆಯಾಮ     ಡಾ. ಅಶೋಕ್. ಕೆ. ಆರ್.
‘ಈ ರೀತಿ ದಿನಗಟ್ಟಲೆ ಮಳೆ ಸುರಿದಿದ್ದೇ ಇಲ್ಲ ನಮ್ಮೂರಲ್ಲಿ’ ಸಂಜೆ ಆಫೀಸಿನಲ್ಯಾರೋ ಹೇಳಿದ ಮಾತುಗಳನ್ನು ಮೆಲಕುಹಾಕುತ್ತ ಕಿಟಕಿಯ ಬಳಿ ನಿಂತಿದ್ದ ರಾಜು ಮೌಳೇಶ್ವರ್. ಭೂರಮೆಯನ್ನೇ ಸೀಳಿಹಾಕುವಂತಹ ಗುಡುಗಿನ ಶಬ್ದಕ್ಕೆ ಎಚ್ಚರವಾಗಿ ರೂಮಿನಿಂದ ಹೊರಬಂದು ಮಳೆಯ ಆರ್ಭಟವನ್ನು ವೀಕ್ಷಿಸುತ್ತಿದ್ದ. ಯಾವ ಫೋನೂ ಬರದಿದ್ದರೆ ಸಾಕಪ್ಪ ಎಂದುಕೊಳ್ಳುವಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗಣಿಸಿತು. ಈ ಲ್ಯಾಂಡ್ ಲೈನನ್ನೂ ಸ್ವಿಚ್ ಆಫ್ ಮಾಡುವ ಹಾಗಿದಿದ್ದರೆ ಚೆನ್ನಾಗಿತ್ತು ಎಂದುಕೊಂಡು ರಿಸೀವರ್ ತೆಗೆದುಕೊಂಡ
          “ಹಲೋ”
          “ಹಲೋ ಕಮಿಷನರ್ ಸರ್ರಾ”
          “ಹೌದು ಹೇಳಿ”
          “ನಾನು ಸರ್ ರವಿ. ದೊಡ್ಮೋರೀಲಿ ಜೋರು ಮಳೆಗೆ ಸ್ಲಮ್ಮೋರು ನಾಲ್ಕು ಜನ ಕೊಚ್ಚಿಕೊಂಡು ಹೋಗಿದ್ದಾರೆ ಸರ್”   ‘ಸಾಯ್ಲಿ ಬಿಡಿ’ ನಾಲಗೆಯ ತುದಿಗೆ ಬಂದ ಮಾತನ್ನು ತಡೆಹಿಡಿದುಕೊಂಡು ......
* * *
          ಬೆಳಗಿನಿಂದ ತುಂತುರುವಿನಂತೆ ಉದುರುತ್ತಿದ್ದ ಮಳೆ ಸಂಜೆ ವೇಳೆಗೆ ರಭಸ ಕಂಡುಕೊಂಡಿತ್ತು. ಅದು ಆ ವರ್ಷದ ಮೊದಲ ಮುಂಗಾರು ಮಳೆ. ಮನೆಗೆ ಹೋಗಲು ಅಣಿಯಾಗುತ್ತಿದ್ದ ರಾಜು ಮೌಳೇಶ್ವರ್. ದೊಡ್ಮೋರೀಲಿ ನೀರು ಕಟ್ಟಿಕೊಂಡು ದೊಡ್ಮೋರಿ ಸ್ಲಮ್ಮಿಗೆಲ್ಲ ನೀರು ನುಗ್ತಾ ಇದೆ ಎಂಬ ಸುದ್ದಿ ಬಂತು. ಐದು ನಿಮಿಷಗಳಲ್ಲಿ ಸ್ಲಮ್ಮಿನ ಬಳಿಗೆ ಬಂದಿದ್ದ ರಾಜು ಮೌಳೇಶ್ವರ್. ಮೊದಲ ಮಳೆಗೆ ಈ ರೀತಿಯಾದರೆ ಮುಂದೆ ಹೇಗೆ ಎಂದು ಯೋಚಿಸುತ್ತಾ ತಾತ್ಕಾಲಿಕವಾಗಿಯಾದರೂ ಇವರನ್ನೆಲ್ಲ ಒಂದೆಡೆಗೆ ಸ್ಥಳಾಂತರಿಸಬೇಕೆಂದು ಯೋಚಿಸುತ್ತ ನಿಂತಿದ್ದ. 

          ‘ಇಲ್ನೀರು ನಿಂತಿದೆ ಸರ್’ ‘ಅಲ್ನೀರು ನುಗ್ತಾ ಇದೆ ಸರ್’ ಎಂದ್ಹೇಳುತ್ತಿದ್ದರು ಅಲ್ಲಿನ ಜನ. ಆ ಭಾಗದ ಎಂ ಎಲ್ ಎ ಬಂದ ತಕ್ಷಣ ಅಲ್ಲಿಯವರೆಗೂ ಸುಮ್ಮನೆ ಒಂದೆಡೆ ಮಳೆಯಿಂದ ಮರೆಗೆ ನಿಂತಿದ್ದ ಇಬ್ಬರು ಶಾಸಕರ ಬಳಿ ಓಡೋಡಿ ಬಂದರು. ಒಬ್ಬ ಎತ್ತರಕ್ಕಿದ್ದ, ದಾಂಡಿಗ. ಮತ್ತೊಬ್ಬ ಅವನಷ್ಟೇ ಎತ್ತರ ವಿಪರೀತವೆನಿಸುವಷ್ಟು ಸಣ್ಣಕ್ಕಿದ್ದ. ಕಣ್ಣಲ್ಲಿ ನೀರು ಹರಿಸುತ್ತ ‘ನೋಡಿ ಸರ್. ಈ ಆಫೀಸರ್ಗಳು ಮೋರಿ ಕ್ಲೀನ್ ಮಾಡ್ದೆ ನಮಗೊಂದು ಸೂರೂ ಇಲ್ದಂಗೆ ಮಾಡ್ ಬುಟ್ರು’ ಎದೆ ಬಡಿದುಕೊಳ್ಳುತ್ತ ಗೋಳಾಡಲಾರಂಭಿಸಿದರು. ರಾಜು ಅವರೆಡೆಗೆ ಅಚ್ಚರಿಯಿಂದ ನೋಡುತ್ತಿರುವಾಗಲೇ ಎಂ ಎಲ್ ಎ ಸಾಹೇಬ್ರು ಕಮಿಷನರ್ ಬಳಿಗೆ ಬಂದರು.

          “ಏನ್ರೀ ರಾಜು ಅವ್ರೇ, ಮಳೆಗಾಲ ಬರೋದಿಕ್ಕೆ ಮುಂಚೆ ಮೋರಿಗಳನ್ನೆಲ್ಲ ಕ್ಲೀನ್ ಮಾಡಿಸ್ಬೇಕು ಅನ್ನೋದನ್ನು ನಾವೇ ಹೇಳ್ಕೊಡಬೇಕೇನ್ರಿ”
* * *
          ಪ್ರತೀ ವರುಷದ ಮಳೆಗಾಲದಲ್ಲಿ ಸ್ವಲ್ಪ ಮಳೆಗೂ ನೀರು ದೊಡ್ಡ ಮೋರಿ ಸ್ಲಮ್ಮಿಗೆ ನುಗ್ಗುತ್ತಿತ್ತು. ದೊಡ್ಮೋರೀನ ಸರಿಯಾಗಿ ಕ್ಲೀನ್ ಮಾಡ್ಸೊಲ್ಲ ಅನ್ನೋದನ್ನ ಕೇಳಿ ಕೇಳಿ ರೋಸಿ ಹೋಗಿತ್ತು ರಾಜುಗೆ. ಅದಕ್ಕಾಗೇ ಈ ಬಾರಿ ಖುದ್ದಾಗಿ ಕ್ಲೀನಿಂಗ್ ನಡೀತಾ ಇರೋ ಜಾಗಕ್ಕೆ ಹೋಗಿದ್ದ. ಹವಾಮಾನ ಇಲಾಖೆ ಪ್ರಕಾರ ಮಳೆ ಪ್ರಾರಂಭವಾಗೋದಿಕ್ಕೆ ಇನ್ನೂ ಹದಿನೈದು ದಿನಗಳು ಬಾಕಿಯಿದ್ದವು. ಕ್ಲೀನ್ ಮಾಡಲು ಮೋರಿಯೊಳಗೇ ಇಳಿದಿದ್ದ ಜೆಸಿಬಿಯ ಬಾಯಿಗೆ ದೊಡ್ಡ ಕಲ್ಲುಗಳು, ಸಿಮೆಂಟ್ ಚೂರುಗಳು ಸಿಗುತ್ತಿತ್ತು. “ಈ ಸಲ ಮಳೆಗಾಲದಲ್ಲಿ ಸ್ವಲ್ಪಾನೂ ನೀರು ನಿಲ್ಲಬಾರದು ನೋಡಿ” ರಾಜು ಮೌಳೇಶ್ವರ್ ಹೇಳುತ್ತಿದುದನ್ನು ಕೇಳಿಸಿಕೊಂಡ ಕಾರ್ಮಿಕನೊಬ್ಬ “ಪ್ರತೀ ವರುಷಾನೂ ಸರಿಯಾಗೇ ಕ್ಲೀನ್ ಮಾಡ್ತೀವಿ ಸರ್. ಅಲ್ಲಿ ಹಿಂದೆ ನೋಡಿ... ಆ ಮಣ್ಣು ದೊಡ್ದೊಡ್ಡ ಇಟ್ಟಿಗೆ ಸಿಮೆಂಟು ಚೂರು ಮೋರಿಯೊಳಗೆ ಬಿದ್ದೂ ಬಿದ್ದೂ ಹಿಂಗಾಯ್ತದೆ ಸರ್” ಎಂದ.

          “ಯಾರದದು?”

          “ಎಂ ಎಲ್ ಎ ಸಾಹೇಬರ ತಮ್ಮನ್ದು ಸರ್. ಕಂಟ್ರ್ಯಾಕ್ಟರ್ ಅವ್ರು. ಎಲ್ಲೇ ಮಣ್ಣು ಕೀಳ್ಲೀ, ಹಳೆ ಮನೆಗಳನ್ನು ಒಡ್ದುಹಾಕ್ಲಿ ಅದೆಲ್ಲ ತಂದು ಮೋರಿ ಪಕ್ಕ ಕೆಲ್ವೊಮ್ಮೆ ಮೋರಿಯೊಳಗೇ ಸುರೀತಾರೆ ಸರ್. ಸುಮ್ಮನೆ ನಾವು ಕೆಲಸ ಮಾಡೋದಿಲ್ಲ ಅಂತೀರ ನೀವು”
* * *
          “ಈ ಬಾರಿ ನಾನೇ ಸ್ಪಾಟಿನಲ್ಲಿ ನಿಂತು ಕ್ಲೀನ್ ಮಾಡ್ಸಿದ್ದೆ ಸರ್. ಒಬ್ಬ ಕಂಟ್ರ್ಯಾಕ್ಟರ್ ದಿನಾ ಕಲ್ಲು ಮಣ್ಣು ತಂದು ಸುರೀತಾರೆ ಸರ್. ಎಷ್ಟು ಸಲ ಹೇಳಿದ್ರೂ ಕೇಳೋದಿಲ್ಲ ಸರ್. ಇನ್ಫ್ಲುಯೆನ್ಸ್ ಅದೂ ಇದೂ ಅಂತಾರೆ”

          “ಯಾರ್ರೀ ಅದು?”

          “ನಿಮ್ಮ ತಮ್ಮ ಸರ್” ಮೆಲುದನಿಯಲ್ಲಿ ಸುತ್ತಲಿನವರಿಗೆ ಕೇಳಿಸದಂತೆ ಹೇಳಿದ.

          ಉತ್ತರ ಕೇಳಿದ ಶಾಸಕರೇನೂ ವಿಚಲಿತರಾದಂತೆ ಕಾಣಲಿಲ್ಲ. ದನಿಯೇರಿಸುತ್ತ “ನೀವು ಸೇವೆ ಮಾಡಬೇಕಿರುವುದು ಜನಗಳಿಗೇ ಹೊರ್ತು ನನ್ನ ತಮ್ಮನಿಗಲ್ಲ. ಮೊದ್ಲು ಅವನಿಗೆ ನೋಟೀಸ್ ಕೊಡಿ” ಸುತ್ತಲಿನವರಿಗೆಲ್ಲ ಕೇಳಿಸುವಂತೆ ಹೇಳಿದರು.
ಹತ್ತು ದಿನದ ನಂತರ ಎಂ ಎಲ್ ಎ ಕಮಿಷನರ್ರನ್ನು ನೋಡಲು ಖುದ್ದು ಅವರ ಕಛೇರಿಗೇ ಬಂದರು. ಕಛೇರಿಯ ಹೊರಗೆ ನಾನಾ ಕೆಲಸಕ್ಕೆ ಕಾಯುತ್ತಿದ್ದ ಜನರ ಜೊತೆ ಒಂದಷ್ಟು ಸಮಯ ಕಳೆದು ಒಳಗೆ ಬಂದರು. ಅವರು ಕುಳಿತ ನಂತರ ರಾಜು ಕುಳಿತ.

          “ನನ್ನ ತಮ್ಮನಿಗೆ ನೋಟೀಸ್ ಕಳುಹಿಸಿದ್ದೀರಂತೆ” ನಗುತ್ತಾ ಕೇಳಿದರು. “ನೀವೇ ಹೇಳಿದ್ರಲ್ಲ ಸರ್”. ಗಹಗಹಿಸಿ ನಕ್ಕು “ನಿಮ್ಗೇನ್ ಕಮಿಷನರ್ರೇ ಹಂಗೂ ಹಿಂಗೂ ಒಂದ್ಸಲ ಪರಿಕ್ಷೇಲೀ ಪಾಸಾಗಿಬಿಟ್ಟರೆ ರಿಟೈರಾಗೋವರೆಗೂ ಅಧಿಕಾರದಲ್ಲೇ ಇರ್ತೀರ. ನಮ್ದಂಗಲ್ಲವಲ್ಲ, ಐದೈದು ವರ್ಷಕ್ಕೂ ಕೆಲವೊಮ್ಮೆ ಇನ್ನೂ ಬೇಗ ಜನಗಳ ಮುಂದೆ ಮಣ್ಣು ಹೊರಬೇಕು. ಜನಗಳ ಮುಂದೆ ಒಂದಷ್ಟು ಇಮೇಜ್ ಹೆಚ್ಚಾಗಲಿ ಅಂತ ನಾಲ್ಕು ಮಾತಾಡಬಹುದು. ಅದನ್ನೆಲ್ಲ ಸಿರೀಯಸ್ಸಾಗಿ ತಗೋಬಾರದು”. ಆಯಿತೆಂಬಂತೆ ತಲೆಯಾಡಿಸಿದ. “ಪರ್ವಾಗಿಲ್ಲ ಬಿಡಿ. ನೀವೂ ಹೊಸಬ್ರು. ಯಾರ್ ಏನ್ ಹೇಳಿದ್ರೂ ಮನಸ್ಸಿಗ್ಹಾಕಿಕೊಂಡು ಮಾಡ್ಬಿಡ್ತೀರ. ಅಂದ್ಹಾಗೆ ಸ್ಲಮ್ಮಿನ ಕಡೆ ಹೋಗಿದ್ರಾ?”

          “ಹ್ಞೂ ಸರ್ ಹೋಗಿದ್ದೆ. ಆ ಸ್ಲಂ ಅಲ್ಲಿರೋತನಕ ಈ ತೊಂದರೆ ತಪ್ಪಿದಲ್ಲ ಸರ್. ಅದಿಕ್ಕೆ ಅವರನ್ನೆಲ್ಲ ಬೇರೆಡೆಗೆ ಸ್ಥಳಾಂತರಿಸಿದರೆ ಹೇಗೆ ಅಂತ”

          “ಎಲ್ಲಿಗೇಂತ ನಿಮ್ಮ ಮನಸ್ಸಿನಲ್ಲಿರೋದು”

          “ಐದು ವರ್ಷದ ಹಿಂದೆ ಆಶ್ರಯ ಮನೆಗಳನ್ನು ಅರ್ಧಂಬರ್ಧ ಕಟ್ಟಿತ್ತಲ್ಲ ಸರ್. ಆಗೇನೋ ಊರಿಂದಾಚೆ ಅಂತ ಯಾರೂ ಹೋಗದೆ ಪಾಳುಬಿದ್ದೋಯ್ತು. ಈಗ ಆ ಮನೆಗಳನ್ನೂ ದಾಟಿ ಊರು ಬೆಳೆದುಬಿಟ್ಟಿದೆ. ಅಲ್ಲಿಗೆ ಸ್ಥಳಾಂತರಿಸಿದ್ರೆ ಚೆನ್ನಾಗಿರುತ್ತೆ ಅಂತ ನನ್ನ ಅಭಿಪ್ರಾಯ. ನೀವೇನಂತೀರ ಸರ್”. “ಒಳ್ಳೇದು ಒಳ್ಳೇದು. ಒಳ್ಳೇ ಕೆಲಸಕ್ಕೆ ನನ್ನ ಬೆಂಬಲ ಯಾವತ್ತೂ ಇದೆ”

          “ಏನ್ ಸರ್ ನೀವು. ಆ ಕಮಿಷನರ್ ಹೇಳಿದ್ದಕ್ಕೆ ಒಳ್ಳೇದು ಒಳ್ಳೇದು ಅಂತ ತಲೆಯಾಡಿಸಿಬಿಟ್ರಲ್ಲ” ಶಾಸಕರ ಪಿ ಎ ಕಾರಿನಲ್ಲಿ ಹೇಳಿದ. “ಅವರು ಹೇಳಿದ್ರಲ್ಲೂ ಅರ್ಥ ಇದೆಯಲ್ಲವಾ? ಈ ಸ್ಲಂನಲ್ಲಿ ನರಕವಾಸ ಅನುಭವಿಸೋದಕ್ಕಿಂತ ಅಲ್ಲೇ ಇರಲಿ ಬಿಡು”. ಪಿ ಎ ಹಣೆ ಬಡಿದುಕೊಳ್ಳುತ್ತ “ ನಿಮ್ಮ ತಮ್ಮನೋರು ಮುಂದಿನ ಸಲ ಕಾರ್ಪೋರೇಟರ್ ಎಲೆಕ್ಷನ್ನಿಗೆ ನಿಲ್ಲಬೇಕು ಅಂತಿದ್ದಾರಲ್ಲ ಸರ್. ಅವರು ನಿಲ್ಲಬೇಕೂ ಅಂತಿರೋ ವಾರ್ಡಿನಲ್ಲೇ ಅಲ್ವ ಸರ್ ಈ ಸ್ಲಂ ಬರೋದು.” “ಹೌದಲ್ಲ! ಏನೋ ಜನರಿಗೆ ಅನುಕೂಲವಾಗುತ್ತೆ ಅಂಥ ಆ ಕಮಿಷನರ್ ಹೇಳಿದ್ದಕ್ಕೆ ಹ್ಞೂಂಗುಟ್ಟಿದೆ! ಇದನ್ನು ನಾನು ಯೋಚಿಸಲೇ ಇಲ್ಲ ನೋಡು.”
*
          “ದೊಡ್ಮೋರಿ ಸ್ಲಂನೋರು ಒಂದ್ಹತ್ತದಿನೈದು ಜನ ಬಂದಿದ್ದಾರೆ ಸರ್. ನಿಮ್ಮನ್ನು ಕಾಣ್ಬೇಕಂತೆ”

          “ಸರಿ ಕಳಿಸು”. ಒಳಬಂದವರನ್ನು ಗಮನಿಸಿದ ರಾಜು ಮೌಳೇಶ್ವರ್. ಹತ್ತು ಜನರ ಗುಂಪಿನ ಮುಂದೆ ನಿಂತಿದ್ದ ದಾಂಡಿಗ ಮತ್ತು ಸಣಕಲನ ಗುರುತು ಹತ್ತುವುದು ಕಷ್ಟವಾಗಲಿಲ್ಲ. ಏನೋ ತೊಂದರೆಯಿದೆ ಎಂಬ ಭಾವ ಬಂತು. ಏನು ವಿಷಯ ಎಂಬಂತೆ ಅವರೆಡೆಗೆ ನೋಡಿದ.

          “ನಮ್ಮುನ್ನೆಲ್ಲ ಬೇರೆ ಕಡೆಗೆ ಶಿಫ್ಟ್ ಮಾಡ್ತೀರಂತೆ” ದಾಂಡಿಗ ಕೇಳಿದ.

          “ಹೌದು ಆ ರೀತಿ ಒಂದು ಪ್ಲಾನ್ ಇದೆ. ಇನ್ನೂ ತೀರ್ಮಾನವಾಗಿಲ್ಲ”

          “ಬೇಡಿ ಸರ್. ನಾವಿಲ್ಲೇ ಇರ್ತೀವಿ” ಇನ್ನೊಬ್ಬ ಹೇಳಿದ.

          “ಯಾಕ್ರಪ್ಪ ನಾವೇನೂ ಊರಿಂದಾಚೆ ಕಳಿಸಬೇಕು ಅಂತಿಲ್ಲ. ಆಶ್ರಯ ಮನೆಗಳಿವೆ. ಒಂದಷ್ಟು ಕಿಟಕಿ ಬಾಗಿಲು ಹಾಕಿಸಿ ಪೈಂಟು ಹೊಡಿಸಿಬಿಟ್ರೆ ಹೊಸಾ ಮನೆಗಳ್ಕಂಡಂಗೆ ಕಾಣುತ್ತೆ. ಅನುಕೂಲಗಳು ಚೆನ್ನಾಗಿವೆ ಅಲ್ಲಿ”

          “ನಮಗೆ ಹೊಸ ಮನೆ ಬೇಡಿ ಸರ್”

          “ಪ್ರತಿ ಮಳೆಗಾಲದಲ್ಲೂ ಮನೆಗಳಿಗೆ ನೀರು ನುಗ್ಗುತ್ತೆ ಇಲ್ಲಿ. ಅಲ್ಲಾ ಪ್ರಾಬ್ಲಮ್ಮೇ ಇಲ್ಲ”

          “ಆದ್ರೂ ಪರವಾಗಿಲ್ಲ ಸರ್. ನಾವಿಲ್ಲೇ ಇರ್ತೀವಿ” ತಾಳ್ಮೆ ಮಾಯವಾಗುತ್ತಾ ಸಾಗಿತು. “ಯಾಕ್ರೀ ಬೇಡ ಅಂತೀರಾ? ನಿಮ್ಮ ಉಪಯೋಗಕ್ಕೆ ಮಾಡ್ತಿರೋದಕ್ಕೂ ಅಡ್ಡಬಾಯಿ ಹಾಕ್ತೀರಲ್ಲ?” “ನಮಗೆ ಬೇಡ ಸರ್” “ಬೇಡ ಬೇಡ. ಅಲ್ಲೇನೂ ದೆವ್ವ ಕುಣೀತಿದ್ಯಾ ಬೇಡ ಅನ್ನೋದಿಕ್ಕೆ?” ಹಿಂದೆ ನಿಂತಿದ್ದವರಲ್ಲಿ ಕೆಲವರು ತಲೆಯಾಡಿಸಿದರು. ರಾಜು ಮೌಳೇಶ್ವರನಲ್ಲಿ ಉಕ್ಕುತ್ತಿದ್ದ ಕೋಪದ ಜಾಗದಲ್ಲಿ ಈಗ ಆಶ್ಚರ್ಯ, ಗಾಬರಿ. “ಏನು?” ಹೆಚ್ಚುಕಡಿಮೆ ಕಿರುಚಿದ.

          “ಅವು ಸ್ಮಶಾನದ ಮೇಲೆ ಕಟ್ಟಿದ ಮನೆಗಳಂತಲ್ಲ ಸರ್. ಅದಿಕ್ಕೆ ಇಷ್ಟು ವರ್ಷದಿಂದ ಖಾಲಿ ಇದ್ದಿದ್ದಂತೆ. ರಾತ್ರಿಯೆಲ್ಲ ಏನೇನೋ ಶಬ್ದಗಳು ಬೇರೆ ಬರುತ್ತಂತಲ್ಲ ಸರ್” ದಾಂಡಿಗ ಹೆದರಿದ ದನಿಯಲ್ಲಿ ಹೇಳಿದನಾದರೂ ಮುಖದಲ್ಲಿ ಹೆದರಿಕೆಯ ಭಾವವಿರಲಿಲ್ಲ.

          “ಇದನ್ನೆಲ್ಲ ಯಾರ್ ಹಬ್ಸಿದ್ದು?” ಒಂದಿಬ್ಬರು ದಾಂಡಿಗನ ಕಡೆ ನೋಡಿದರೆ ಮಿಕ್ಕವರು ಒಬ್ಬರ ಮುಖವನ್ನೊಬ್ಬರು ನೋಡಿ ತಲೆತಗ್ಗಿಸಿದರು. “ಇದಕ್ಕೆ ನಾನೇನೂ ಮಾಡೋದಿಕ್ಕಾಗಲ್ಲ. ನೋಡಿ ಯಾರಿಗೆ ಹೊಸ ಮನೆಗಳಿಗೆ ಬರಲು ಮನಸ್ಸಿದೆಯೋ ಅವರು ಬನ್ನಿ. ಮಿಕ್ಕವ್ರು......ಏನಾದ್ರೂ ಮಾಡ್ಕೊಳ್ಳಿ. ಸದ್ಯಕ್ಕೆ ನಿಮಗೆ ಆ ಮನೆಗಳಿಗೆ ಬಿಟ್ಟು ಬೇರೆ ಕಡೆಗೆ ಶಿಫ್ಟ್ ಮಾಡೋದಿಕ್ಕೆ ಜಾಗವಿಲ್ಲ” ಕೋಪದಿಂದಲೇ ಹೇಳಿದ.

         “ಪರವಾಗಿಲ್ಲ ಸರ್. ನಾವಿಲ್ಲೇ ಇರ್ತೀವಿ” ದಾಂಡಿಗನ ಮುಖದಲ್ಲಿದ್ದ ನಗು ವಿವಿಧಾರ್ಥಗಳನ್ನು ಸೂಚಿಸುತ್ತಿತ್ತು. ವರುಷದೊಳಗೆ ಮೂರೇ ಮೂರು ಕುಟುಂಬದವರು ಆಶ್ರಯ ಮನೆಗಳಿಗೆ ಬಂದರು.
* * * * *
          .....ಫೋನ್ ರಿಂಗಣಿಸಿತು. ಈ ಲ್ಯಾಂಡ್ ಲೈನನ್ನೂ ಸ್ವಿಚ್ ಆಫ್ ಮಾಡೋ ಹಾಗಿದ್ರೆ ಚೆನ್ನಾಗಿತ್ತು ಎಂದುಕೊಂಡು ರಿಸೀವರ್ ತೆಗೆದುಕೊಂಡು
          “ಹಲೋ”
          “ಹಲೋ ಕಮಿಷನರ್ ಸರ್ರಾ”
          “ಹೌದು ಹೇಳಿ”
          “ನಾನು ಸರ್ ರವಿ. ದೊಡ್ಮೋರೀಲಿ ಜೋರು ಮಳೆಗೆ ಸ್ಲಮ್ಮೋರು ನಾಲ್ಕು ಜನ ಕೊಚ್ಚಿಕೊಂಡು ಹೋಗಿದ್ದಾರೆ ಸರ್” ‘ಸಾಯ್ಲಿ ಬಿಡಿ’ ನಾಲಗೆಯ ತುದಿಗೆ ಬಂದ ಮಾತನ್ನು ತಡೆಹಿಡಿದುಕೊಂಡು ಕರ್ತವ್ಯಪ್ರಜ್ಞೆಯನ್ನು ನೆನಪು ಮಾಡಿಕೊಂಡು ಕೊಡಬೇಕಾದ ಆದೇಶಗಳನ್ನೆಲ್ಲಾ ಕೊಟ್ಟು ಹತ್ತು ನಿಮಿಷದಲ್ಲಿ ಅಲ್ಲಿರ್ತೀನಿ ಎಂದು ತಿಳಿಸಿದ.
          ಎಂ ಎಲ್ ಎ ಸಾಹೇಬ್ರು, ಹೋದ ವಾರ ಕಾರ್ಪೋರೇಟರ್ ಎಲೆಕ್ಷಿನ್ನಿನಲ್ಲಿ ಗೆದ್ದ ಅವರ ತಮ್ಮ ಅದಾಗಲೇ ಘಟನಾ ಸ್ಥಳಕ್ಕೆ ಬಂದಿದ್ದರು.
          “ಏನ್ರೀ ರಾಜು ಅವ್ರೆ. ಮಳೆಗಾಲ ಬರೋದಿಕ್ಕೆ ಮುಂಚೆ ಮೋರಿಗಳೆಲ್ಲಾ ಕ್ಲೀನಾಗಿ ಬಿಡಬೇಕು.......
* * * * *
ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಥೆ

No comments:

Post a Comment