May 29, 2012

ಸಾಮಾಜಿಕ ಕಳಕಳಿಯೆಂದರೆ.....

ಡಾ ಅಶೋಕ್ ಕೆ ಆರ್
ತೀರ ಗಂಗಾಧರ್ ಮೊದಲಿಯಾರ್ ಕೂಡ ಈ ರೀತಿಯಾಗಿ ಬರೆಯಬಲ್ಲರು ಎಂದು ನಿರೀಕ್ಷಿಸಿರಲಿಲ್ಲ! ಪ್ರಜಾವಾಣಿಯ ಸಿನಿಮಾರಂಜನೆಯ ಫಿಲಂ ಡೈರಿ ಅಂಕಣದಲ್ಲಿ ಅಮೀರ್ ಖಾನನ ಸತ್ಯಮೇವ ಜಯತೆಯ ಬಗ್ಗೆ ಬರೆದಿದ್ದಾರೆ. ‘ಬುರುಡೆ ಪುರಾಣ’ ಎಂಬ ಶೀರ್ಷಿಕೆಯೇ ಅಸಂಬದ್ಧವಾಗಿದೆ. ಅಮೀರ್ ಖಾನನ ಕೆಲಸವನ್ನು ಮೆಚ್ಚುತ್ತಲೇ ಅವನನ್ನು ತೆಗಳುತ್ತಾ ಹೋಗುತ್ತಾರೆ. ಭಾವನೆಗಳನ್ನು ಉದ್ರಿಕ್ತಗೊಳಿಸಿ ಹಣ ಮಾಡುವ ‘ದಂಧೆ’ ಎಂದುಬಿಡುತ್ತಾರೆ. ಅಮೀರ್ ಖಾನ್ ಹೋರಾಟಗಾರನಲ್ಲ, ಸಾಮಾಜಿಕ ಕಾರ್ಯಕರ್ತನೂ ಅಲ್ಲ; ಆತ ಒಬ್ಬ ನಟ, ನಿರ್ಮಾಪಕ, ನಿರ್ದೇಶಕ. ಹಣವಿಲ್ಲದೆ ಏನೂ ಮಾಡಲಾಗದ ಚಿತ್ರರಂಗದವನು. ಯಾವ ಕಾರ್ಯಕ್ರಮ ಮಾಡಿದರೂ ಅದರಿಂದ ಲಾಭ ಬರುವುದನ್ನು ಅವನು ಗಮನಿಸಲೇಬೇಕು. ‘ಏರ್ ಟೆಲ್ನಿಂದ ಮೇಸೇಜ್ ಮಾಡಿ, ಕೇವಲ ಒಂದು ರುಪಾಯಿ’ ಎಂದವನು ಕಾರ್ಯಕ್ರಮದ ಕೊನೆಯಲ್ಲಿ ಹೇಳುವುದು ಕೂಡ ಲಾಭದ ಒಂದು ಮುಖ. ಇವೆಲ್ಲವೂ ಸತ್ಯವೇ, ಆದರೆ....
ಪತ್ರಿಕೆಗಳಿರಬಹುದು, ಅಂತರ್ಜಾಲ ತಾಣಗಳಲ್ಲಿರಬಹುದು ಇಂದು ಅಮೀರ್ ಖಾನನ ಕಾರ್ಯಕ್ರಮವನ್ನು ಅಮಿತಾಭ್ ನಡೆಸಿಕೊಟ್ಟ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಹೋಲಿಸಿ ಮಾತನಾಡುತ್ತಾರೆ. ಕೋಟ್ಯಧಿಪತಿಗೆ ಹೆಚ್ಚು ಟಿ.ಆರ್.ಪಿ ಇತ್ತು ಎಂದು ಹೇಳುತ್ತಾರೆ. ಇವೆರಡೂ ಕಾರ್ಯಕ್ರಮಗಳನ್ನು ಹೋಲಿಸುವುದೇ ಹಾಸ್ಯಾಸ್ಪದ. ಎರಡರ ಉದ್ದಿಶ್ಯವೂ ಬೇರೆ. ‘ಪ್ರೈಮ್ ಟೈಮ್’ ಎಂದು ಕರೆಯಲ್ಪಡುವ ರಾತ್ರಿ ಎಂಟರ ಸಮಯವನ್ನು ಬಿಟ್ಟು ಅಮೀರ್ ಖಾನ್ ಭಾನುವಾರ ಬೆಳಿಗ್ಗೆ ಹನ್ನೊಂದರ ಸಮಯವನ್ಯಾಕೆ ಆರಿಸಿದ ಎಂಬುದನ್ನೂ ಗಮನಿಸಬೇಕಲ್ಲವೇ? ಹಣ ಮಾಡುವುದಷ್ಟೇ ಉದ್ದೇಶವಾಗಿದ್ದರೆ ಈ ‘ಮೂರ್ಖ’ ಕೆಲಸವನ್ಯಾಕೆ ಮಾಡಬೇಕಿತ್ತವನು?
ಇನ್ನು ಭಾವನೆಗಳ ದುರುಪಯೋಗದ ಬಗ್ಗೆ ಬರೆಯುವ ಗಂಗಾಧರ್ ಮೊದಲಿಯಾರರು ಕನ್ನಡದಲ್ಲೇ ಲಕ್ಷ್ಮಿ, ಮಾಳವಿಕ ಗಂಡ ಹೆಂಡಿರ ಜಗಳವನ್ನು ಬಿಡಿಸಿದ್ದಾರೆ , ಇಂಥ ಕಾರ್ಯಕ್ರಮವನ್ನು ಬೆಂಬಲಿಸಿ ಎಂದಿದ್ದಾರೆ! ಬಹುಶಃ ಅವರು ಆ ಕಾರ್ಯಕ್ರಮಗಳನ್ನು ಸರಿಯಾಗಿ ಗಮನಿಸಿದ ಹಾಗೆ ಕಾಣುವುದಿಲ್ಲ. ಮನೆಯೊಳಗಿನ ಜಗಳವನ್ನು ಟಿವಿ ಮುಂದೆ ತಂದು ಅಲ್ಲೇ ಅವರು ಬಡಿದಾಡುವುದನ್ನು ತೋರಿಸಿ ಹಣ ಮಾಡಿದ ಕಾರ್ಯಕ್ರಮಗಳನ್ನು ಸಮಾಜವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲಲೆತ್ನಿಸುತ್ತಿರುವ ಸತ್ಯಮೇವ ಜಯತೆಗೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ?
‘ಪುನೀತ್ ಕೋಟ್ಯಧಿಪತೆಯನ್ನು ಸಮರ್ಥವಾಗೇ ನಿಭಾಯಿಸಬಹುದಾದರೆ ಅಮಿತಾಭ್ ರ ಕೌನ್ ಬನೇಗಾ ಕರೋಡ್ ಪತಿಯನ್ನು ಡಬ್ ಮಾಡಬೇಕೇಕೆ?’ ಎಂದು ಪ್ರಶ್ನಿಸುತ್ತಾರೆ. ಕನ್ನಡದ ಕೋಟ್ಯಧಿಪತಿ ಯಶಸ್ವಿ ಕಾರ್ಯಕ್ರಮ, ಪುನೀತ್ ಅದನ್ನು ಚೆನ್ನಾಗಿಯೇ ನಡೆಸಿಕೊಡುತ್ತಿದ್ದಾರೆ ಎಂಬುದು ನಿಜವಾದರೂ ಅದು ವರುಷಗಳ ಹಿಂದೆ ಬಂದ ಹಿಂದಿ ಕಾರ್ಯಕ್ರಮದ ಯಥಾವತ್ ರೀಮೇಕು ಎಂಬುದನ್ನು ಮರೆಯಬಾರದಲ್ಲವೇ? ಪುನೀತ್ ಸಾಮರ್ಥ್ಯ ರೀಮೇಕುಗಳಲ್ಲಿ ಕಳೆದುಹೋಗುವಷ್ಟು ಕನ್ನಡದ ಕ್ರಿಯಾತ್ಮಕ ಮನಸ್ಸುಗಳು ಜಡಗಟ್ಟಿ ಹೋಗಿದೆಯೇ?
‘ಸತ್ಯಮೇವ ಜಯತೆ’ ಹೊಸ ವಿಷಯಗಳನ್ನೂ ಹೇಳುತ್ತಿಲ್ಲ, ಆಂದೋಲನವೂ ಅಲ್ಲ, ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಅನೇಕ ವರದಿಗಳು ಈಗಾಗಲೇ ಬಂದಿವೆ ಎನ್ನುತ್ತಾರೆ. ಅದೇ ವಿಷಯಗಳನ್ನು ಇನ್ನೊಂದು ನೂರು ಜನಕ್ಕೆ ತಲುಪಿಸುತ್ತೀನಿ ಎಂದು ಖ್ಯಾತ ನಟನೊಬ್ಬ ಮುಂದೆ ಬಂದರೆ ಅದರಿಂದಾಗುವ ಅನಾಹುತವೇನು? ಐಶ್ವರ್ಯ ರೈಗೆ ಮಗುವಾಗಿದ್ದು, ಸಾನಿಯಾ ಮದುವೆಯಾಗಿದ್ದು, ಶಾರೂಖ್ ಗಲಾಟೆ ಮಾಡಿಕೊಂಡಿದ್ದು ಮುಖಪುಟ ಸುದ್ದಿಯಾಗುತ್ತದೆ, ಚಿತ್ರಗಳ ಪ್ರಚಾರಕ್ಕೆ ಬರುವವರ ರಂಗುರಂಗಿನ ಫೋಟೋ ಪ್ರಕಟವಾಗುತ್ತದೆ. ಎಲ್ಲೋ ಒಬ್ಬ ನಟ ಲಾಭದೊಟ್ಟಿಗೆ ಸಾಮಾಜಿಕ ಕಳಕಳಿಯನ್ನೂ ತೋರಿಸಿದರೆ ಈ ರೀತಿ ಟೀಕೆಗೆ ಒಳಗಾಗುತ್ತಾನೆ! ಬ್ಲಾಗುಗಳಲ್ಲಿ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ ಎಂಬ ಗಂಭಿರ ಆರೋಪ ಮಾಡುತ್ತಾರೆ ಗಂಗಾಧರ್ ರವರು. ಹಳ್ಳಿ ಹುಡುಗರನ್ನು ಪೇಟೆಗೆ ಕರೆಸಿ ‘ಮಜಾ’ ತೆಗೆದುಕೊಳ್ಳುವ ಕಾರ್ಯಕ್ರಮವನ್ನೇನೂ ನಾವು ಬೆಂಬಲಿಸುತ್ತಿಲ್ಲ ಅಲ್ಲವೇ?
ಏರ್ ಟೆಲ್ ಮೆಸೇಜಿಗೆ ‘ಒಂದು ರುಪಾಯಿ’ ಎಂಬುದು ಲಾಭದ ಬಾಬತ್ತು, ಅನುಮಾನವಿಲ್ಲ. ಬೇರೆ ಕಾರ್ಯಕ್ರಮಗಳಲ್ಲಿ ಅದೇ ಒಂದು ಮೆಸೇಜು ಆರು ರುಪಾಯಿ ಬೆಲೆಬಾಳುತ್ತದೆ ಎಂಬುದನ್ನೂ ಮರೆಯಬಾರದಲ್ಲವೇ?!
ಕೊನೆಯದಾಗಿ ಲೇಖನ ಬರೆಯುವ ಅತ್ಯಾತುರದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಉಳಿದುಕೊಂಡಿರುವ ಭಾರತೀಯರು ಅನುಭವಿಸುತ್ತಿರುವ ವೇದನೆ.... ಎಂದು ಬರೆದಿದ್ದಾರೆ. ಅದು ಪಾಕಿಸ್ತಾನದ ‘ಹಿಂದೂಗಳು’ ಎಂದಾಗಬೇಕಿತ್ತಲ್ಲವೇ? ಭಾರತದ ಮುಸ್ಲಿಮರನ್ನು ‘ಪಾಕಿಗಳು’ ಎಂದು ಹೇಳುವುದು ಎಷ್ಟು ತಪ್ಪೋ ಪಾಕಿಸ್ತಾನದ ಹಿಂದುಗಳನ್ನೂ ‘ಭಾರತೀಯರು’ ಎಂದು ಕರೆಯುವುದು ಅಷ್ಟೇ ತಪ್ಪಲ್ಲವೇ?
ಹಿಂಗ್ಯಾಕೆ : - ಅಮೀರ್ ಖಾನನ ‘ಸತ್ಯಮೇವ ಜಯತೆ’ ಕಾರ್ಯಕ್ರಮಗಳ ಬಗೆಗಿನ ಚರ್ಚೆ ಆ ಕಾರ್ಯಕ್ರಮದ ನಿರೂಪಕರು ಆಯ್ದುಕೊಂಡ ವಿಷಯಗಳಿಗೆ ಸಂಬಂಧಪಟ್ಟಂತೆ ಆಗಬೇಕಿತ್ತು. ಆದರೆ ಕಾರ್ಯಕ್ರಮದ ವಿಷಯಗಳನ್ನೊರತುಪಡಿಸಿ ಮತ್ತೆಲ್ಲ ಚರ್ಚೆಗಳೂ ನಡೆಯುತ್ತಿವೆ! [ಈ ಲೇಖನವನ್ನೂ ಒಳಗೊಂಡಂತೆ!]. ನಟನೊಬ್ಬ ಸಾಮಾಜಿಕ ಕಳಕಳಿ ತೋರಿಸದಿದ್ದರೂ ಮಾಧ್ಯಮಗಳು ಟೀಕಿಸುತ್ತವೆ. ತೋರಿಸಿದರೆ ಅನುಮಾನದಿಂದ ನೋಡುತ್ತವೆ. ಸ್ಟೇಡಿಯಂನಲ್ಲಿ ಸಿಗರೇಟು ಸೇದಿ ಭದ್ರತಾ ಸಿಬ್ಬಂದಿಯ ಜೊತೆಗೆ ಜಗಳ ತೆಗೆಯುವವರ ಬಗೆಗಿನ ಚರ್ಚೆಗಳೇ ಇಂದಿನ ಆಕರ್ಷಣೆಗಳಾಗಿಬಿಟ್ಟಿದೆಯಲ್ಲ! ಹಿಂಗ್ಯಾಕೆ?!

4 comments:

 1. ಯಾರದೋ ಸಿಟ್ಟು ಇನ್ನ್ಯಾರದೋ ಮೇಲೆ ! ಗಂಗಾಧರ್ ವಸ್ತುನಿಷ್ಟವಾಗಿ ಬರವಣಿಗೆ ಮಾಡುವವರು. ಆದರೆ 'ಬುರುಡೆ ಪುರಾಣ' ಎಂಬ ಲೇಖನದ ಮೂಲಕ ಅವರು ಏನು ಹೇಳಲು ಹೊರಟಿದ್ದಾರೆಂದು ಅರ್ಥವಾಗುತ್ತಿಲ್ಲ. ಹಾಗಾದರೆ ಸಾಮಾಜಿಕ ವಿಷಯಗಳನ್ನು ಎತ್ತಿಕೊಂಡು ಕಾರ್ಯಕ್ರಮ ಮಾಡುವುದು ಬೇಡವೇ ! ನನಗೆ ಅನ್ನಿಸುತ್ತೆ, ಮೊನ್ನೆ ಅಮೀರಖಾನ್ 'ಡಾಕ್ಟರುಗಳ ಬಣ್ಣ ಬಯಲು' ಮಾಡಿದ್ದ ಸಂಚಿಕೆಯನ್ನು ನೋಡಿದ್ದರೆ, ಗಂಗಾಧರ್ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬಹುದೆನಿಸುತ್ತದೆ !
  ಡಾ. ಸಿದ್ರಾಮ ಕಾರಣಿಕ, ಧಾರವಾಡ

  ReplyDelete
 2. satya meva jayate, truth alone prevails. the problem is with so much lies lying around it will take some time for nature (or god or whatever u want to call it) to clear as to what the truth is, duration of which is more than our life expectancy.... so that we cannot clearly say that this is truth. but may be the solution lies in trust or faith.

  ReplyDelete
 3. The same thing had happened with Anna Hazare.Though supported by many there were people ( including you), who had criticized him.
  Whatever the criticism or obstacles, that which prevails IS BOUND TO BE true. "ಸತ್ಯಮೇವ ಜಯತೆ"

  ReplyDelete
 4. @ dr.raj
  ofcourse i had criticized partly about anna hazare. but it is absurd to compare anna hazare and amir khan! we should never compare a social movement with a tv programme with social concern. mistakes in social movement will cause more harm than the tv programme. hope u will agree with this. and as we have seen the fate of anna hazare's movement i think all the criticisms against him was not completely wrong.

  ReplyDelete