Mar 14, 2012

ಒಂದು ಅಪಘಾತ ಮತ್ತು ನಮ್ಮ ‘ಅಭಿವೃದ್ಧಿ’

ಫೋಟೋ ಮೂಲ - ಡೆಕ್ಕನ್ ಹೆರಾಲ್ಡ್
ಡಾ ಅಶೋಕ್.ಕೆ.ಆರ್.
‘Oh my god’ ನಮ್ಮ ಬೆಂಗಳೂರು ಎಷ್ಟೆಲ್ಲ ಅಭಿವೃದ್ಧಿಯಾಗಿಬಿಟ್ಟಿದೆ! ಮೆಟ್ರೋ ರೈಲಾಗಲೇ ಚುಕುಬುಕು ಅಂತ ಓಡಾಡಲಾರಂಭಿಸಿದೆ. ಅಷ್ಟದಿಕ್ಕುಗಳಲ್ಲೂ ಫ್ಲೈಓವರ್ ಮೇಲೆ ಫ್ಲೈಓವರ್ ಕಟ್ಟಲಾಗುತ್ತಿದೆ. ಮಾಲ್ ಗಳು ಗಲ್ಲಿಗೊಂದರಂತೆ ಪ್ರಾರಂಭವಾಗುತ್ತಿವೆ. ವೋಲ್ವೋ ಬಸ್ಸಿಗೆ ಸೆಡ್ಡು ಹೊಡೆಯಲು ಮರ್ಸಿಡಿಸ್ ಬಸ್ಸುಗಳು ರಾಜಠೀವಿಯಿಂದ ಸಂಚರಿಸಲಾರಂಭಿಸಿವೆ. ಓಹ್! ಯಾವ ದುಬಾರಿ ಕಾರಾದರೂ ಲಭ್ಯವಿದೆ ನಮ್ಮಲ್ಲಿ! ಇನ್ನೇನು ಬೇಕು? ಬೆಂಗಳೂರು ಸಿಂಗಪುರವಾಗಿ ಭಾರತ ಸೂಪರ್ ಪವರ್ ರಾಷ್ಟ್ರವಾಗುವುದಕ್ಕೆ ಇನ್ನು ಕ್ಷಣಗಣನೆ ಆರಂಭಿಸಿಯೇಬಿಡಬಹುದಲ್ಲವೇ? ! ಒಂದ್ನಿಮಿಷ ತಡೀರಿ!
ಇದೇ ಬೆಂಗಳೂರಿನಲ್ಲಿ ಮೊನ್ನೆ ಐಷಾರಾಮಿ ವಾಹನವೊಂದು ಇರುವ ರಸ್ತೆ ಸಾಲದೆ ಫುಟ್ ಪಾತಿನ ಮೇಲೆ ಸಂಚರಿಸಿ ಕೆಲವೇ ದಿನಗಳ ಹಿಂದಷ್ಟೇ ತಂದೆಯಾಗಿದ್ದ ನಾಗರಾಜನನ್ನು ಬಲಿತೆಗೆದುಕೊಂಡಿದೆ. ದಶಕಗಳ ಹಿಂದೆ ಶಂಕರ್ ನಾಗ್ ನಿರ್ದೇಶಿಸಿದ್ದ ‘ಆಕ್ಸಿಡೆಂಟ್’ ಚಿತ್ರ ತಮಗೆ ನೆನಪಿರಬೇಕು. ಪ್ರಮುಖ ರಾಜಕಾರಣಿಯೊಬ್ಬರ ಮಗ ಮಾದಕ ವಸ್ತುಗಳ ಅಮಲಿನಲ್ಲಿ ಕಾರನ್ನು ಫುಟ್ ಪಾತಿನ ಮೇಲೆ ಓಡಿಸಿ ಅಲ್ಲಿ ಮಲಗಿದ್ದ ಕಾರ್ಮಿಕರನ್ನು ಹತ್ಯೆಗೈಯುತ್ತಾನೆ. ಕಾರ್ಮಿಕರೆಲ್ಲ ಉತ್ತರಕರ್ನಾಟಕದ ಬರವನ್ನೆದುರಿಸಲಾಗದೆ ಕೂಲಿಯನ್ನರಸಿ ಬೆಂಗಳೂರಿಗೆ ಬಂದಿರುತ್ತಾರೆ. ಮಲಗಲು ಯೋಗ್ಯ ಸ್ಥಳವಿಲ್ಲದೆ ಫುಟ್ ಪಾತನ್ನೇ ಹಾಸಿಗೆಯನ್ನಾಗಿಸಿ ಬೆಂಗಳೂರಿನ ಗಾಳಿಯನ್ನೇ ಹೊದಿಕೆಯನ್ನಾಗಿಸಿಕೊಂಡವರಿಗೆ ಸಾವು ಕಾರಿನ ರೂಪದಲ್ಲೂ ಬರಬಹುದು ಎಂಬ ಅಂದಾಜಿರಲಿಲ್ಲ.
ಆ ಚಿತ್ರ ಬಂದು ದಶಕಗಳ ಮೇಲಾಯಿತು. ಈಗಲೂ ಅದೇ ರೀತಿಯ ಘಟನೆ ನಿಜದಲ್ಲಿಯೂ ಘಟಿಸಿರುವುದು ನಮ್ಮ ‘ಅಭಿವೃದ್ಧಿ’ಯ ಮಾಪಕ ಎಂದರೆ ತಪ್ಪಾಗಲಾರದು. ಇಲ್ಲೂ ಸಾವನ್ನಪ್ಪಿರುವ, ಗಾಯಗೊಂಡಿರುವ ಜನ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯಿಂದ ಬಂದಿರುವವರು. ಕೆಲಸವನ್ನರಸಿ ಬಂದವರಿಗೆ ಉದ್ಯೋಗ ದೊರಕಿದ್ದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ. ಶೆಡ್ಡುಗಳಲ್ಲಿನ ಸೆಖೆ ತಾಳಲಾರದೆ ಫುಟ್ ಪಾತಿನ ಮೇಲೆ ಮಲಗಿದ್ದರೆನ್ನುವುದು ಪತ್ರಿಕೆಗಳಲ್ಲಿನ ವಿವರ. ಯಮರೂಪಿ ವಾಹನದ ಚಾಲನೆ ಮಾಡುತ್ತಿದ್ದುದು ಕುಡಿತದ ಅಮಲಿನಲ್ಲಿದ್ದ ಓರ್ವ ಯುವತಿ ಎಂಬುದು ಗಾಯಗೊಂಡವರ ಹೇಳಿಕೆ.
ಇಲ್ಲಿ ನಿಜಕ್ಕೂ ತಪ್ಪು ಯಾರದು? ಕುಡಿದು ಯದ್ವಾತದ್ವಾ ಗಾಡಿ ಚಲಾಯಿಸಿದ ಮಹಿಳೆಯದೋ? ಬೀದಿ ಮೇಲೆ ಮಲಗಿದ ಕಾರ್ಮಿಕರದೋ? ಅಥವಾ ನಗರ ಕೇಂದ್ರಿತ ಅಭಿವೃದ್ಧಿಗಷ್ಟೇ ಒತ್ತು ಕೊಡುತ್ತಿರುವ ನಮ್ಮ ವ್ಯವಸ್ಥೆಯದಾ? ದೂರದೂರುಗಳಿಂದ ಕೂಲಿ ಕೆಲಸವನ್ನರಸಿ ಗುಳೇ ಹೋಗುವಂಥಹ ಸ್ಥಿತಿಯ ನಿರ್ಮಾಣವೇಕೆ ಏರ್ಪಟ್ಟಿದೆ ಎಂಬುದರ ಬಗ್ಗೆ ಗಮನಹರಿಸದಿದ್ದರೆ ಇಂಥ ಅಪಘಾತಗಳು ‘ಕೇವಲ ಆಕಸ್ಮಿಕ’ ‘ಹಾಳಾಗುತ್ತಿರುವ ಯುವಜನರ ಸಂಸ್ಕೃತಿ’ ಎಂದು ಹೇಳುವುದಕ್ಕಷ್ಟೇ ಸೀಮಿತವಾದೀತು. ಎಲ್ಲ ಅಭಿವೃದ್ಧಿ ಕಾರ್ಯಗಳು ನಗರಗಳಿಗೆ ಸೀಮಿತವಾಗುತ್ತಿದೆ. ಅದರಲ್ಲೂ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬೆಂಗಳೂರಿಗೆ ಮೀಸಲಾಗುತ್ತಿದೆ. ಬೆಂಗಳೂರಿನಲ್ಲಿ ಅರ್ಧ ಘಂಟೆ ವಿದ್ಯುತ್ ಅಭಾವವಾದರೂ, ಎರಡು ದಿನ ನೀರು ಬರದಿದ್ದರೂ ಸುದ್ದಿಯಾಗುತ್ತದೆ. ಬೆಂಗಳೂರಿನಿಂದ ನಗರಗಳಿಂದ ದೂರ ಸಾಗಿದರೆ ವಿದ್ಯುತ್ ನೆಂಟನಂತೆ ಬರುತ್ತದೆಯಷ್ಟೇ. ಇನ್ನು ಉತ್ತರ ಕರ್ನಾಟಕದ ಬಿಸಿಲಿನಲ್ಲಿ ಹಳ್ಳಿಗಾಡಿನ ಜನರ ನೀರಿನ ಬವಣೆ ಅನುಭವಿಸಿದವರಿಗಷ್ಟೇ ತಿಳಿದೀತು.
ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುತ್ತ ಸಣ್ಣ ಹಳ್ಳಿಗಳನ್ನೂ ರಾಜಕೀಯ ದ್ವೇಷಾಗ್ನಿಯಲ್ಲಿ ಮುಳುಗಿಸುವ ನಮ್ಮ ವ್ಯವಸ್ಥೆ ಅಭಿವೃದ್ಧಿಯನ್ನು ಕೇಂದ್ರೀಕೃತಗೊಳಿಸುವುದರಲ್ಲೇ ಹೆಚ್ಚು ಆಸ್ಥೆ ತೋರಿಸುತ್ತದೆ. ತನ್ನ ಹಳ್ಳಿ ಅಥವಾ ತನ್ನ ಊರಿನ ಆಸುಪಾಸಿನಲ್ಲೇ ಅಭಿವೃದ್ಧಿ ಕಾರ್ಯಗಳು ನಡೆದಿದ್ದಲ್ಲಿ ನಾಗರಾಜನಂಥವರು ಬೆಂಗಳೂರಿಗೆ ಬಂದು ಸಾವನ್ನಪ್ಪುವ ಸಂಭವವಿರಲಿಲ್ಲ ಅಲ್ಲವೇ? ನಗರೀಕರಣದ ಭರದಲ್ಲಿ ಹಳ್ಳಿಗರನ್ನು ನಗರಕ್ಕೆ ಆಕರ್ಷಿಸುವ ವ್ಯವಸ್ಥೆ ಗುಳೇ ಬಂದವರ ಬದುಕಿನ ಸ್ಥಿತಿ – ಗತಿಗಳನ್ನೂ ಗಮನಿಸಬೇಕಲ್ಲವೇ? ಬಡವ ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತ ಸಾಗುವುದೇ ನಮ್ಮ ‘ಅಭಿವೃದ್ಧಿ’ಯಾಗಿದೆ.
ಕೊನಗೆ ಇಂಥ ಲೇಖನಗಳನ್ನು ಬರೆಯುವ ನಮ್ಮಂಥ ‘ನೆಟ್ಟಿ’ಗರದೂ ಕೂಡ ಒಂದು ರೀತಿಯ ವೈಚಾರಿಕ ಹಿಂಸಾಪ್ರವೃತ್ತಿ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.


No comments:

Post a Comment