Feb 16, 2012

ಪಾಕಿಸ್ತಾನ್ ಜಿಂದಾಬಾದ್!!


ವಿಧಾನಸಭಮ್ಮ ಶ್ಯಾನೆ ಬೇಸರದಲ್ಲಿ ಕುಂತಿದ್ದಳು. ‘ಇದ್ಯಾಕಕ್ಕ ಹಿಂಗ್ ಆಕಾಶ್ವೇ ತಲೆ ಮೇಲ್ ಬಿದ್ದೋಳ್ತರ ಮುಖ ಮಾಡ್ಕಂಡಿದ್ದೀಯೆ? ಅದರಲ್ಲೂ ಕಲಾಪ ನಡೆಯೋ ಟೇಮ್ನಾಗೆ?’ ಎಂದು ಕುಶಲೋಪರಿ ವಿಚಾರಿಸಿದ ಹೈಕೋರ್ಟ್. ‘ಹಲ್ಕಾ ನನ್ ಮಕ್ಳು’ ಗೊಣಗಿ ತಲೆತಗ್ಗಿಸಿದಳು. ಕಡತದಿಂದ ತೆಗೆಯುವಂಥ ಮಾತುಗಳನ್ನು ವಿಧಾನಸಭಮ್ಮನೇ ಆಡಿದ್ದು ಕೇಳಿ ಅಚ್ಚರಿಯಾಯ್ತು. ‘ಯಾರಕ್ಕ ಹಲ್ಕ ನನ್ ಮಕ್ಳು?’
‘ಇನ್ಯಾರು?! ಈ ಹಾಳು ಪೇಪರ್ರು ಟಿವಿಯೋರು, ಬುದ್ಜೀವಿಗಳು, ಮಹಿಳಾ ಸಂಘಟನೆಗಳು ಎಲ್ರೂ ಹಲ್ಕಾಗಳೇ’
‘ಅರೆರೆ!! ಇದೇನಕ್ಕ ಹಿಂಗ್ ಮಾತಾಡ್ತಿ. ಅವರೇನ್ ಮಾಡುದ್ರು’
‘ಮತ್ತೆ ಇಬ್ರು ಸಚಿವರು ನನ್ನ ಮಾನಭಂಗ ಮಾಡಿದ್ರು ಅಂತ ಗಲಾಟೆ ಮಾಡ್ಕೊಂಡು ನಿಂತವಲ್ಲ’
‘ಓ! ಆ ವಿಷಯ! ತಪ್ಪೇನಕ್ಕ ಅದರಲ್ಲಿ? ನಿನ್ಹತ್ರ ಇದ್ದಾಗಲೇ ಅವರು ಅಂಥ ವೀಡಿಯೋ ನೋಡಿದ್ದು ತಪ್ಪಲ್ವೇನಕ್ಕ? ಅದಿಕ್ಕೆ ಗಲಾಟೆ ಮಾಡ್ತವ್ರೆ’
‘ನೀನೂ ಹಂಗೆ ಮಾತಾಡ್ಲ. ಪಾಪ! ಮೊದ್ಲೇ ಅವು ಬಿಜೆಪಿ ಪಕ್ಸದೋರು. ದೇಶ ಸಂಸ್ಕೃತಿ ಮಹಿಳೆ ಅಂದ್ರೆ ಶಾನೆ ಗೌರವ ಕೊಡೋ ಜನ. ಅವರ ಬಗ್ಗೆ ಕೆಟ್ದಾಗಿ ಮಾತನಾಡಿದ್ರೆ ಸಿಟ್ಟು ಬರೋದಿಲ್ವ ಹೇಳು ಮಂತೆ?’
‘ಆದ್ರೂ ಅಂಥ ವೀಡಿಯೋವಾ ನಿನ್ತಾವ್ ಇದ್ದಾಗ್ಲೇ ನೋಡೋದ್ ನಂಗೇನೋ ಸರಿ ಕಾಣಕಿಲ್ಲ ಕಣ್ ಬಿಡು’
‘ನಿಮಗೆ ಅರ್ಥವೇ ಆಗ್ನಿಲ್ಲ ಕಲಾ ಬಿಜೆಪಿಯೋರು. ಕಲಾಪ ನೋಡೋ ಹೊತ್ನಾಗಿ ಅವನ್ಯಾರೋ “ಹೊಟ್ಟೆಗೆ ಹಿಟ್ಟಿಲ್ದೆ ಹೊದ್ಕೋಳ್ಳಿಕ್ಕೆ ಬಟ್ಟೆ ಇಲ್ದಿರೋ” ಜನಗಳ ಬಗ್ಗೆ ಬಡಬಡಿಸ್ತಿದ್ದ. ಬಿಜೆಪಿಯೋರೋ ಧರ್ಮನಿಷ್ಠರು, ಭಾರತ ದೇಶದ ವೈಭವದ ದಿನಗಳ ಪುನರ್ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರೋರು. ಅವರಿಗೆ ಮೈತುಂಬಾ ಸೀರೆ ಹೊದ್ದ ನಾರಿಯೇ ಕಣ್ಮುಂದೆ ಬರೋದು. ಹೊದ್ಕೊಳ್ಳಿಕ್ಕೆ ಬಟ್ಟೆ ಇಲ್ದಿರೋರು ಹೆಂಗಿರ್ತಾರೆ ಅಂತ ತಿಳ್ಕೋಳ್ಳೋದಿಕ್ಕೆ ಆ ಸವದಿ ವೀಡಿಯೋ ನೋಡ್ತಿದ್ರೆ ತಪ್ಪೇನ್ಲ’
‘ಅಲ್ ಕಣಕ್ಕ ಆ ವೀಡಿಯೋದಲ್ಲಿ ಕಾಮಕೇಳೀನೂ ಇತ್ತಂತಲ್ಲ. ಛೀ ಛೀ ಪಾಟೀಲರು ಅಲ್ಲಲ್ಲ ಸಿ ಸಿ ಪಾಟೀಲ್ರು ಕೂಡ ಬಗ್ಗಿ ಬಗ್ಗಿ ಸವದಿ ತೊಡೆಸಂದೀಲಿಟ್ಕೊಂಡಿದ್ದ ಮೊಬೈಲ್ನೇ ನೋಡ್ತಿಂದ್ನಂತಲ್ಲ. ನೀನ್ನೋಡಿದ್ರೆ ಹಿಂಗ್ ಹೇಳ್ತಿ’
‘ನೋಡ್ಲಾ ಹೈಕೋರ್ಟು. ನೀನು ಬರೀ ಲಾಪಾಯಿಂಟಿಂದಾನೇ ಮಾತಾಡ್ತಿ. ಆ ಸಿ ಸಿ ಪಾಟೀಲ್ರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಅಂತ ಗೊತ್ತು ತಾನೇ?’
‘ಗೊತ್ತು ಕಣ್ ಹೇಳಕ್ಕ’
‘ಮತ್ತೆ ಗೊತ್ತಿದ್ದೂ ಗೊತ್ತಿದ್ದೂ ಹಿಂಗ್ ಮಾತಾಡ್ತೀಯಲ್ಲ?! ಕಲ್ಯಾಣವಾದ ಮಹಿಳೆಯರು ಏನ್ ಮಾಡ್ತಾರೆ, ಮಕ್ಕಳು ಹೆಂಗ್ ಹುಟ್ತಾರೆ ಅನ್ನೋದನ್ನೇ ತಿಳೀದೆ ಹೋದರೆ ಕಲ್ಯಾಣ ಸಚಿವ ಆಗೋಕಾಯ್ತದೇನ್ಲ?’
‘ಏ ತೆಗಿ ತೆಗಿ. ಏನೂಂತ ಮಾತಾಡ್ತೀ’
‘ಸರಿ ಕಲಾ ನಾನ್ಹೇಳೋದು. ಸಂಸ್ಕೃತಿ ರಕ್ಷಕರನ್ನ ನಾವೇ ರಕ್ಷಿಸ್ದೇ ಹೋದ್ರೆ ಹೆಂಗ್ಲ ಕೋರ್ಟು’
‘ಅಕ್ಕೋ! ನೀನ್ದ್ಯಾಕೋ ತಲೆಕೆಟ್ಟಂತೆ ಕಾಣ್ತದೆ. ಯಾರಕ್ಕ ಸಂಸ್ಕೃತಿ ರಕ್ಷಕರು? ಮೊನ್ನೆ ಇದೇ ಬಿಜೆಪಿ ಸರ್ಕಾರ ಮಲ್ಪೆಯ ಸೆಂಟ್ ಮೇರೀಸ್ ಬೀಚಿನಲ್ಲಿ ರೇವ್ ಪಾರ್ಟಿ ಸಡೆಸಿ ಬೇರೆ ದೇಸದೋರನ್ನ ಕರೆಸಿದ್ರಂತೆ. ನಂಗನಾಚ್, ಕುಡಿತ, ಡ್ರಗ್ಸೂ ಎಲ್ಲ ಇತ್ತಂತೆ’
‘ನೋಡು ನೋಡು! ಅಲ್ಲೇ ಈ ಬಿಜೆಪಿಗಳ ದೊಡ್ತನ ಗೊತ್ತಾಗೋದು. ನಮ್ ಹೆಣ್ಮಕ್ಳು ಏನೋ ಖುಷಿಗೆ ಪಬ್ಬಿಗೋದ್ರೆ ಹಿಡ್ಕೊಂಡು ತದುಕ್ತಾರೆ. ನಮ್ ಸಂಸ್ಕೃತಿ ರಕ್ಷಿಸ್ತಾರೆ. ಬೇರೆ ದೇಸ್ದೋರ ಸಂಸ್ಕೃತೀನೆ ಹಂಗೆ. ಅದಿಕ್ಕೆ ಅವರಿಗೆ ಜಾಗ ಬಾಡಿಗೆಗೆ ಕೊಟ್ಟು ಕುಡಿಸಿ ಚೆನ್ನಾಗಿ ದುಡ್ಡು ಮಾಡಿ ಆ ದುಡ್ನಿಂದ ನಮ್ ಹೆಣ್ಮಕ್ಳಿಗೆ ಮೈತುಂಬಾ ಸೀರೆ ಕೊಡಿಸ್ತಾರೆ...’
‘ಆ ಸೀರೆ ಬಿಚ್ಚಿ ಎಸೆಯೋದನ್ನೇ ಅಂತಲ್ಲ ನಮ್ ಸವದಿ ಸಾಹೇಬ ನೋಡ್ತಿದ್ದಿದ್ದು’
‘ನಿನಗೆ ಅರ್ಥ ಆಗಲ್ಲ ಕಣ್ ಬಿಡು... ಇಂಥ ದೇಸಭಕ್ತರನ್ನು ಯಾರಾದ್ರೂ ನೋಯ್ಸಿದ್ರೆ ನನ್ಗಂತೂ ಸಿಟ್ಟು ಉಕ್ತದೆ’
‘ದಿನವೆಲ್ಲ ಏನೇನೋ ಕೇಳಿ ಕೇಳಿ ನಿನ್ ತಲೆ ಲೂಸಾಗದೆ ಕಣ್ ಬಿಡಕ್ಕೋ. ಏನ್ ದೇಸಭಕ್ತ್ರಕ್ಕ ಇವ್ರು? ಮೊನ್ನೆ ಸಿಂದಗೀಲಿ ಇವರ ಕಡೆಯೋರೆ ಅಂತೆ ಪಾಕಿಸ್ತಾದ ಧ್ವಜ ಹಾರಿಸಿದ್ದು?’
‘ಪಾಕಿಸ್ತಾನ್ ಜಿಂದಾಬಾದ್’ ಎಂದಬ್ಬರಿಸಿ ವಿಧಾನಸಭಮ್ಮ ಮೂರ್ಛೆ ಹೋದಳು. ಹೈಕೋರ್ಟ್ ಗಾಬರಿಗೊಂಡು ನಿಮ್ಹಾನ್ಸಮ್ಮನಿಗೆ ಫೋನ್ ಮಾಡಿದ.
-      ಡಾ. ಅಶೋಕ್.ಕೆ.ಆರ್

No comments:

Post a Comment