Aug 25, 2011

ಅಪೆಕ್ಸ್ ಕೋರ್ಟಿನ ಅಂಗಳದಲ್ಲಿ ದೆಹಲಿಯ ಬಡ ರೋಗಿ



ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಬಟ್ಟೆ, ಮನೆಗೆ ಹಣ ಹೊಂದಿಸಲೂ ಕಷ್ಟಪಡುವ ಜನರೇ ಹೆಚ್ಚಿರುವ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸಂಪೂರ್ಣ ಹೊಣೆ ಸರಕಾರದ್ದೇ ಆಗಿರಬೇಕಾಗಿತ್ತು. ಜಾಗತೀಕರಣದ ಪ್ರಭಾವ, ಉದ್ಯಮವಾದ ಖಾಸಗಿ ಆಸ್ಪತ್ರೆಗಳು, ನಿರೀಕ್ಷೆಯ ಗುಣಮಟ್ಟ ಒದಗಿಸಲು ವಿಫಲವಾದ ಸರಕಾರಿ ಆಸ್ಪತ್ರೆ ಮತ್ತು ಉಳಿದೆಲ್ಲರಂತೆ ವೈದ್ಯರಿಗೂ ಹಣಗಳಿಕೆಯೇ ಪ್ರಮುಖ ಸಂಗತಿಯಾದ ಕಾರಣ ಸರ್ವರಿಗೂ ಉಚಿತ ಆರೋಗ್ಯವೆಂಬುದು ಕನಸಿನಲ್ಲೂ ಯೋಚಿಸಲಾಗದ ಸಂಗತಿಯಾಗಿದೆ. ಪಶ್ಚಿಮೀಕರಣದ ಫಲವಾಗಿ ಆರೋಗ್ಯಕ್ಕೂ ವಿಮೆ ಮಾಡಿಸಲೇಬೇಕಾದದ್ದು ಇಂದಿನ ಜರೂರತ್ತು. ಬಡವರ ಪಾಲಿಗೆ ವಿಮೆ ಮಾಡಿಸುವುದು ಅಸಾಧ್ಯ.


          ಬಹುಶಃ ಇವೆಲ್ಲವನ್ನೂ ಗಮನಿಸಿಯೇ ದೆಹಲಿ ಸರಕಾರ ಭೂಮಿಯನ್ನು ರಿಯಾಯತಿ ದರದಲ್ಲಿ ಪಡೆದುಕೊಂಡ ಆಸ್ಪತ್ರೆಗಳಿಗೆ ಶರತ್ತುಬದ್ಧ ಆದೇಶ ವಿಧಿಸುತ್ತದೆ – 25% ಒಳ ಮತ್ತು 25% ಹೊರರೋಗಿಗಳ ವಿಭಾಗದಲ್ಲಿ ಬಡಜನತೆಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕೆಂದು. ಸರಕಾರದಿಂದ ರಿಯಾಯತಿ ದರದಲ್ಲಿ ಭೂಮಿ ಪಡೆದದ್ದಕ್ಕೆ ಪ್ರತಿಯಾಗಿ ಖಾಸಗಿ ಆಸ್ಪತ್ರಗಳು ಸಮಾಜಕ್ಕೆ ಅದರ ಋಣವನ್ನು ಹಿಂತಿರುಗಿಸಲು ಮಾಡಿದ ಈ ವ್ಯವಸ್ಥೆ ಸಹಜವಾಗಿ ಹಣಗಳಿಕೆಯ ಉದ್ದೇಶದಿಂದ ಆರಂಭವಾದ ಆಸ್ಪತ್ರೆಗಳಿಗೆ ಪಥ್ಯವಾಗುವುದಿಲ್ಲ. ಅಂತೆಯೇ ಅವು ಕೋರ್ಟಿನ ಮೊರೆಹೊಕ್ಕುತ್ತವೆ. 2007ರಲ್ಲಿ ದೆಹಲಿಯ ಹೈಕೋರ್ಟ್ ಸರಕಾರದ ಆದೇಶವನ್ನು ಎತ್ತಿ ಹಿಡಿಯುತ್ತಾದರೂ ಒಳರೋಗಿಗಳ ವಿಭಾಗದ ಉಚಿತ ಚಿಕಿತ್ಸೆಯನ್ನು 25% ದಿಂದ 10% ಗೆ ಇಳಿಸುತ್ತದೆ.

          ಈ ನಿಬಂಧನೆಗೆ ಒಳಪಡುವ ನಲವತ್ತು ಆಸ್ಪತ್ರೆಗಳಲ್ಲಿ ಇಪ್ಪತ್ತೇಳು ಆಸ್ಪತ್ರೆಗಳು ಹೈಕೋರ್ಟಿನ ತೀರ್ಪನ್ನು ಪಾಲಿಸಿದ ಪರಿಣಾಮವಾಗಿ 29ಲಕ್ಷಕ್ಕೂ ಅಧಿಕ ರೋಗಿಗಳು ಉಚಿತ ಚಿಕಿತ್ಸೆಯ ಫಲಾನುಭವಿಗಳಾಗಿದ್ದಾರೆ. ಮೂಲಚಂದ್ ಕೈರಾವತಿ ರಾಮ್ ಆಸ್ಪತ್ರೆ, ಸೇಂಟ್ ಸ್ಟೀಫನ್ಸ್ ಆಸ್ಪತ್ರೆ, ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ತಾವು ರಿಯಾಯತಿ ದರದಲ್ಲಿ ಭೂಮಿಯನ್ನು ಪಡೆದುಕೊಂಡಿಲ್ಲವಾಗಿ ತಮಗೆ ಈ ಆದೇಶ ಅನ್ವಯವಾಗಬಾರದೆಂದು ಮತ್ತೆ ಹೈಕೋರ್ಟಿನ ಮೊರೆ ಹೋಗಿವೆ.

          ಧರ್ಮಶೀಲ ಆಸ್ಪತ್ರೆ, ವಿಮ್ಹಾನ್ಸ್, ಫೋರ್ಟಿಸ್ ಎಸ್ಕಾರ್ಟ್ಸ್ ಹೃದಯಾಲಯ, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ, ಶ್ರೀ ಬಾಲಾಜಿ ವೈದ್ಯಕೀಯ ಸಂಸ್ಥೆ, ಜೈಪುರ ಗೋಲ್ಡನ್ ಆಸ್ಪತ್ರೆ, ದೀಪಕ್ ಮೆಮೋರಿಯಲ್ ಆಸ್ಪತ್ರೆ, ಸುಂದರ್ ಲಾಲ್ ಜೈನ್ ಆಸ್ಪತ್ರೆ, ಭಗವತಿ ಆಸ್ಪತ್ರೆ ಉಚಿತ ಚಿಕಿತ್ಸೆಯನ್ನು 10 ಮತ್ತು 25% ದಿಂದ 2%ಗೆ ಇಳಿಸಬೇಕೆಂದು ಅಪೆಕ್ಸ್ ಕೋರ್ಟಿನ ಮೊರೆಹೊಕ್ಕಿವೆ, ಸರಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ. ಬಡರೋಗಿಗಳನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಉದ್ದಿಶ್ಯದಿಂದ ಫೋರ್ಟಿಸ್ ಆಸ್ಪತ್ರೆ ಉಚಿತ ರೋಗಿಗಳಿಗಾಗಿ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಘಂಟೆ ಹೊರರೋಗಿಗಳ ವಿಭಾಗವನ್ನು ನಡೆಸಲು ಕೋರಿದ ಅನುಮತಿಯನ್ನೂ ಸರಕಾರ ನಿರಾಕರಿಸಿದೆ. ನಮ್ಮ ಸರಕಾರಗಳು ಇಂಥ ದಿಟ್ಟ ಜನಪರ ನಿಲುವನ್ನು ತೋರಿಸಿರುವುದು ನಿಜಕ್ಕೂ ಮೆಚ್ಚುವ ಕೆಲಸ.

          ಅಪೆಕ್ಸ್ ಕೋರ್ಟಿನಲ್ಲೂ ಸರಕಾರದ ವಾದಕ್ಕೆ ಮನ್ನಣೆ ದೊರೆಯಲೆಂದು ಆಶಿಸೋಣ.
 ಅಶೋಕ್. ಕೆ. ಆರ್.
ನಿನ್ನೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ದೆಹಲಿ ಸರಕಾರದ ನಿಲುವನ್ನು ಎತ್ತಿ ಹಿಡಿದಿದೆ.  - ಸಂ.

No comments:

Post a Comment