Jul 22, 2011

ತೊಡಿಕಾನ, ದೇವರಗುಂಡಿ ಮತ್ತು ಸರಕಾರದ ಹುಂಡಿ!!

ಅಶೋಕ್. ಕೆ.ಅರ್
ಒಂದು ಕಡೆ ಎಕ್ಸಪ್ರೆಸ್ ಹೈವೇ,ಬೆಂಗಳೂರು ಮೈಸೂರು  ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ, ಆರು ಲೇನ್ - ಎಂಟು ಲೇನ್ ರಸ್ತೆ, ದೊಡ್ಡ ನಗರಗಳಲ್ಲಿ ಹೆಜ್ಜೆಗೊಂದರಂತೆ ಫ್ಲೈಓವರ್ ಗಳು, ಸಬ್ವೇಗಳು - ಆಹಾ!! ಸಂಪೂರ್ಣ  ಅಭಿವೃದ್ಧಿಯಾಗಿಬಿಟ್ವಲ್ಲ!! ಇನ್ನೊಂದೆಡೆ ಪ್ರಾಚೀನ ಯುಗದಲ್ಯಾವಾಗಲೋ ಟಾರು ಕಂಡಿದ್ದ ರಸ್ತೆಗಳು. ದಪ್ಪ ಜಲ್ಲಿ ಕಲ್ಲಿನ ಮೊನಚಾದ ತುದಿಗಳು ನಮ್ಮ ಸ್ವಾಗತಕ್ಕೆ ಮುಗಿಲೆಡೆಗೆ ಮುಖ ಮಾಡಿ ನಿಂತಿರುವ ರಸ್ತೆಗಳು. ಇಂತಿಪ್ಪ ರಸ್ತೆಗಳನ್ನು ದಾಟಿ ಮುನ್ನಡೆದರೆ ಮತ್ತಷ್ಟು ಹಿಂದಿನ ಯುಗವನ್ನೂ ತೋರಿಸುವ ಮಣ್ಣಿನ ರಸ್ತೆಗಳು. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಗಳು.
ತೊಡಿಕಾನದಿಂದ ದೇವರಗುಂಡಿಯೆಡೆಗೆ ಹೋಗುವ ರಸ್ತೆಯಲ್ಲಿ ಸಂಚರಿಸಿದಾಗ ಬಂದ ಭಾವನೆಯಿದು. ಇಂಥ ರಸ್ತೆಗಳನ್ನು ಬಯಲುಸೀಮೆಯಲ್ಲೂ ಕಾಣಬಹುದಾದರೂ ಇಲ್ಲಿ ಅದೂ ಮಳೆಗಾಲದಲ್ಲಿ ಇಂಥ ರಸ್ತೆಗಳಲ್ಲಿ ಸಂಚರಿಸುವುದು ಹೊಸಬರಿಗೆ ಸಾಹಸವೇ ಸರಿ. ಅದೂ ಬೈಕಿನಲ್ಲಿ ಮತ್ತಷ್ಟು ಕಷ್ಟದ ಕೆಲಸ.
ರಸ್ತೆಯ ಯಾವ ಪಕ್ಕದಲ್ಲಿ ಬೈಕು ಸಂಚರಿಸಬೇಕೆಂಬುದನ್ನು ರಸ್ತೆಯೇ ನಿರ್ಧರಿಸುತ್ತದೆ!! ನಮ್ಮ ಪ್ರೀತಿ ಪಾತ್ರ ಪ್ರಾಣವನ್ನು ರಸ್ತೆಯ ಕೈಗೆ ಒಪ್ಪಿಸಿ ಸುತ್ತಲಿನ ಸೌಂದರ್ಯವನ್ನು ಸವಿಯುತ್ತ ಹೋಗಬೇಕು! ಸಾಯುವ ಪರಿಸ್ಥಿತಿ ಉದ್ಭವಿಸಿದರೆ ಕೊನೇಪಕ್ಷ ಕಣ್ಣ ಪಟಲದಲ್ಲಿ ಪ್ರಕೃತಿಯ ಒಂದಷ್ಟು ಸುಂದರ ದೃಶ್ಯಗಳಾದರೂ  ಉಳಿದೀತು. ಇಳಿಜಾರಿನಲ್ಲಿ ವೇಗ ತಗ್ಗಿಸಲು ಬ್ರೇಕ್ ಒತ್ತಿದರೆ ಬೈಕು ಜಾರುತ್ತೆ, ಏರು ಹಾದಿಯಲ್ಲಿ ಹಳ್ಳಕೊಳ್ಳ ತುಂಬಿದ ರಸ್ತೆ ಎಂದು ನಿಧಾನ ಮಾಡಿದಲ್ಲಿ ಸಾವಕಾಶ ಹಿಂದೆ ಚಲಿಸುತ್ತೆ. ಅಲ್ಲಿನವರಿಗೆ ಇಂಥ ರಸ್ತೆಗಳಲ್ಲಿ ಸಂಚರಿಸಿ ರೂಢಿಯಾಗಿದೆಯಂತೆ. ಹೊರಗಿನವರಾದ ನಮಗೆ ಕಷ್ಟ. ಯಾರಿಗೆ ಗೊತ್ತು? ನಮ್ಮ ಪ್ರಜಾಪ್ರಭುತ್ವದ ವಿಶೇಷವೇ ಇದಿರಬೇಕು. ಇನ್ನೊಂದಷ್ಟು ಬಾರಿ ಓಡಾಡಿದಲ್ಲಿ ನಮಗೂ ಕೂಡ ಈ ರಸ್ತೆಗಳು ಅಭ್ಯಾಸವಾಗಿಬಿಡಬಹುದು!!ಸರಕಾರದ ಕೇಂದ್ರಿಕೃತ ಮಾದರಿಯ ಅಭಿವೃದ್ದಿಯ ಬಗ್ಗೆ ಗೊಣಗದೆ ನಾವು ಆ ರಸ್ತೆಯಲ್ಲಿ ಬರುವ ಹೊಸಬರಿಗೆ 'ನಮಗೆ ಈ ರಸ್ತೆಗಳಲ್ಲಿ ಓಡಾಡಲಿಕ್ಕೆ ಎಳ್ಳಷ್ಟೂ ಕಷ್ಟವಿಲ್ಲ , ಸರಾಗ' ಎಂದು ಹೇಳಿಕೊಂಡಿರಬಹುದೋ ಏನೋ?! ಇರಲಿ.

ತೊಡಿಕಾನದ ಹದಿಮೂರನೇ ಶತಮಾನದ ದೇವಾಲಯದಲ್ಲಿ ಇನ್ನೂ ಆ ಶತಮಾನದ ಆಚರಣೆಗಳೇ ಚಾಲ್ತಿಯಲ್ಲಿರಬೇಕು! ಅಂಗಿ ಬಿಚ್ಚಿದರೆ ಮಾತ್ರ ಗಂಡಸರಿಗೆ ಒಳಪ್ರವೇಶ, ಪ್ರಾಂಗಣದಲ್ಲಿರುವ ಕಟ್ಟೆಗಳ ಮೇಲೆ ಹೆಂಗಸರಿಗೆ ಮತ್ತು ಸೂತಕದ ಮನೆಯವರಿಗೆ ಕುಳಿತುಕೊಳ್ಳುವ ಭಾಗ್ಯವಿಲ್ಲ. ದೇವರ ಆಲಯದಲ್ಲೇ ಅವನ ಮಕ್ಕಳಿಗೆ ತಾರತಮ್ಯವಿದೆ. ಅಂಥ ದೇವರ ಮುಂದೆ ಆಣೆ ಪ್ರಮಾಣ ಮಾಡುತ್ತೇವೆನ್ನುವ, ಮಾಡಿ ಸತ್ಯವಂತರೆಂದು ತೋರಿಸಿಕೊಳ್ಳಬಯಸುವವರು ನಮ್ಮ ನಾಡ ಮುನ್ನಡೆಸುವ ಜನನಾಯಕರು. ಧನ್ಯ.


ಪಯಸ್ವಿನಿ ನದಿ


ಮತ್ಸ್ಯಗಂಧಿ

ದೊಡ್ಡಡ್ಕ
ದೈವ, ಜನತೆ, ಸರಕಾರ ಎಲ್ಲವನ್ನೂ ಮರೆತು ಪಕ್ಕಕ್ಕೆ ಸರಿಸಿದ ಕ್ಷಣ ಪ್ರಕೃತಿಯಲ್ಲಿ ಮುಳುಗೇಳಬಹುದು. ಮತ್ಸ್ಯಗಂಧಿ, ದೊಡ್ಡಡ್ಕದ ಬಳಿಯ ಏಕಾಂಗಿ ಬಸ್ ನಿಲ್ದಾಣ, ಪಯಸ್ವಿನಿ ನದಿ ಒಂದಷ್ಟು ಕ್ಷಣವಾದರೂ ದೇಹ ಮನಸ್ಸಿನ ಆಯಾಸ ಆಲಸ್ಯಗಳನ್ನು ಹೊಡೆದೋಡಿಸುವಲ್ಲಿ ಸಫಲವಾಗುತ್ತೆ. ಬೈಕೇರಿ ಮತ್ತೆ ರಸ್ತೆಗಿಳಿದರೆ ಏನಾಶ್ಚರ್ಯ!! ಸ್ವಾಗತ ಕೋರುತ್ತದ್ದ ಅವೇ ಕಲ್ಲುಗಳು ಈಗ ವಿದಾಯ ಹೇಳುತ್ತಿವೆ. "ನೀವು ಮತ್ತೆ ಬಂದಾಗಲೂ ನಾವು ಹೀಗೇ ಇರುತ್ತೇವೆ" ಎಂದೊಂದು ಕಲ್ಲು ವ್ಯಂಗ್ಯದಿಂದ ಹೇಳಿದ್ದು, ಪಕ್ಕದ ಕಲ್ಲುಗಳು ಶ್ ಶ್ ಎಂದು ಆ ಕಲ್ಲಿಗೆ ಗದರಿಸಿದ್ದು ಕೇಳಿತಾದರೂ ತಿರುಗಿ ನೋಡುವ ಮನಸ್ಸಾಗಲಿಲ್ಲ.

No comments:

Post a Comment