Feb 28, 2009

ಒಂದು ಪ್ರೀತಿಯ ಹಿಂದಿನ ಹುನ್ನಾರ.

ಆಕೆ ನನ್ನ ಕೊಲೀಗ್. ಬ್ಯಾಂಕಿಗೆ ಬರುವ ಪ್ರತಿ ಗ್ರಾಹಕನೊಟ್ಟಿಗೂ ನಗುನಗುತ್ತಾ ಮಾತಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಕೆ. ತುಂಬಾ ಲವಲವಿಕೆಯಾಗಿರುತ್ತಿದ್ದಳು ಕೂಡ. ಮೈಸೂರಿನಲ್ಲಿ ವಾಸ. ಹುಣಸೂರಿನ ಬ್ಯಾಂಕಿಗೆ ದಿನಾ ಬಂದು ಹೋಗುತ್ತಿದ್ದಳು. ಇಂಟರೆಸ್ಟಿಂಗ್ ಅಂದ್ರೆ , ಪ್ರತಿ ದಿನ ಆಕೆ ಬರುವಾಗ ಅವರಪ್ಪ ಜೊತೆಗೆ ಬರುತ್ತಿದ್ದರು. ಇಡೀ ದಿನ ಅಲ್ಲಿ ಇಲ್ಲಿ ಕಾಲ ಕಳೆದು ಸಂಜೆ ಮಗಳೊಟ್ಟಿಗೆ ವಾಪಸಾಗುತ್ತಿದ್ದರು.
ಕೆಲವೊಮ್ಮೆ ಕಾಲ ದೂಡುವುದು ಕಷ್ಟವೆನಿಸಿ ಊರು ಅಲೆಯುತ್ತಲೋ, ಊರಿಗೆ ಅಂಟಿಕೊಂಡಿದ್ದ ಅಯ್ಯಪ್ಪ ಸ್ವಾಮಿ ಬೆಟ್ಟದಲ್ಲೋ, ಚಿಕ್ಕಾಲದ ಮರದ ಬಳಿಯಲ್ಲೋ ಕುಳಿತಿರುತ್ತಿದ್ದರು. ಒಮ್ಮೊಮ್ಮೆ ಬ್ಯಾಂಕಿನ ಎದುರಿಗಿನ ಚಹಾ ಅಂಗಡಿಯಲ್ಲಿ ಕುಳಿತು ಪೇಪರ್ ಓದುತ್ತಿದ್ದರು. ಅಷ್ಟರ ಮಟ್ಟಿಗೆ ಆತ ಇಡೀದಿನ ಏಕಾಂಗಿ.
ನನಗೊಂದು ಕುತೂಹಲ . ಯಾಕೆ ಈ ಅಪ್ಪನೆನಿಸಿಕೊಂದವನು ಹೀಗೆ ದಿನ ಮಗಳ ಜತೆ ಬಂದು ಎಕಾಂಗಿಯಾಗುತ್ತಿದ್ದಾನೆ ಎಂದು. ಒಂದಿನ ಆಕೆಯನ್ನು ನಿಲ್ಲಿಸಿ ಕೇಳಿಯೇ ಬಿಟ್ಟೆ. ಅದಕ್ಕವಳು 'ಅಯ್ಯೋ ಅದನ್ನು ಏನಂತ ಕೇಳುತ್ತೀರಾ. ನಾನೊಬ್ಬಳೇ ಮಗಳು ಅವರಿಗೆ.ನಾನು ಎಂದರೆ ವಿಪರೀತ ಕಾಳಜಿ ಮಾಡುತ್ತಾರೆ. ನಾನೆಲ್ಲಿ ಬೇರೆ ಯಾವುದಾದರು ಬಸ್ಸು ಹತ್ತಿಬಿಟ್ಟು ದಾರಿ ತಪ್ಪಿ ಬಿಡುತ್ತೀನೋ ಎನ್ನುವ ಆತಂಕ ಅವರಿಗೆ. ಮನೆಯಲ್ಲಿ ಆರಾಮಾಗಿರಿ ಎಂದರೆ ಕೇಳುವುದಿಲ್ಲ . ಹುಚ್ಚು ಪಪ್ಪಾ . ಅವರು ನನ್ನೆಡೆಗೆ ಇಟ್ಟಿರುವ ಪ್ರೀತಿಗೆ ನಾನು ಎಷ್ಟು ಕೊಟ್ಟರು ಕಡಿಮೆ' ಎಂದಳು.
ಓಕೆ, ಇರಬಹುದು, ಕೆಲವು ಅಪ್ಪಂದಿರು ಮಕ್ಕಳೆಡೆಗೆ ಅಂತಹದೊಂದು ತೀವ್ರ ಥರದ ಪ್ರೀತಿ ಬೆಳೆಸಿಕೊಂದಿರಿತ್ತಾರೆ ಎಂದುಕೊಂಡು ಸುಮ್ಮನಾದೆ.
ಇದಾಗಿ ಎಷ್ಟೋ ದಿನವಾಗಿತ್ತು. ಅವತ್ತು ನನ್ನ ಮದುವೆಯ second anniversary. ಹೆಂಡತಿ , ಮಗನ ಜತೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ನೋಡಿದರೆ ಆಕೆಯ ಅದೇ ಅಪ್ಪ. ಕಣ್ಣುಮುಚ್ಚಿಕೊಂಡು ಧ್ಯಾನಕ್ಕೆ ಕುಳಿತವರ ಹಾಗೆ ಕುಳಿತಿದ್ದರು. ಕೊಂಚ ಹತ್ತಿರ ಹೋಗಿ ನೋಡಿದೆ. ಕೆನ್ನೆ ಮೇಲೆ ಕರೆಗಟ್ಟಿದ ಕಂಬನಿ. ಯಾಕೋ ಮನಸ್ಸು ವಿಹ್ವಳಗೊಂಡಿತು. ವಾರದ ಆರು ದಿನ ಮಗಳೊಂದಿಗೆ ಬಂದರೂ ಎಂದು ನನ್ನ ಅವರ ಭೇಟಿ ಆಗಿರಲಿಲ್ಲ. ಆ ದಿಸೆಯಲ್ಲಿ ಇಬ್ಬರು ಪ್ರಯತ್ನಿಸಲಿಲ್ಲವೋ ಅಥವಾ ಅಂತಹದೊಂದು ಅನಿವಾರ್ಯತೆ ಇಬ್ಬರಿಗೂ ಬೀಳಲಿಲ್ಲವೇನೋ?
ಇಂದ್ಯಾಕೋ ಅವರನ್ನು ಮಾತನಾಡಿಸುವ ತವಕ ಹೆಚ್ಚಾಯಿತು.
ಹೆಂಡತಿ ಮಗನನ್ನು ದೇವಸ್ಥಾನದ ಆವರಣದ ಮೂಲೆಯಲ್ಲಿ ಕುಳ್ಳಿರಿಸಿ , ಅವರ ಹತ್ತಿರ ಹೋಗಿ,'ಯಜಮಾನ್ರೆ' ಅಂದೇ.
ಜೀವ ನಿಧಾನಕ್ಕೆ ಕಣ್ಣು ತೆರೆಯಿತು. ಘನೀಭವಿಸಿದಂತಿದ್ದ ಕಂಬನಿಯ ಹನಿಗಳು ಕೆನ್ನೆಗಿಳಿದವು. ನಾನು ಬ್ಯಾಂಕಿನ ಉದ್ಯೋಗಿ ಅಂತ ಗುರುತು ಸಿಕ್ಕಿತೇನೋ, ಕಣ್ಣೀರು ತಡೆಯುವ ಪ್ರಯತ್ನ ಮಾಡಿದರು.
'ಯಾಕೆ ಯಜಮಾನ್ರೆ ಅಳ್ತಾ ಇದೀರಿ' ಅಂದೇ.
'ಯಾಕೂ ಇಲ್ಲಪ್ಪ' ಎಂದರು. ಅಲ್ಲೊಂದು ದುಗುಡವಿತ್ತು.
ನನ್ನ ಬಗ್ಗೆ ವಿಚಾರಿಸಿಕೊಂಡರು. ಮಾತಿನ ಮಧ್ಯೆ, ' ಅಂಥ ಮಗಳನ್ನು ಪಡೆಯಲಿಕ್ಕೆ ನೀವು ಪುಣ್ಯ ಮಾಡಿರಬೇಕು. ಹಾಗೆಯೇ ನಿಮ್ಮಂಥ ತಂದೆ ಪಡೆದ ಆಕೆಯೂ ಧನ್ಯ ಬಿಡಿ' ಎಂದೆ.
'ಪುಣ್ಯದ ಹಿಂದಿನ ಮುಖವಾಡ ಯಾರಿಗೂ ಅರ್ಥವಾಗೋಲ್ಲ ಬಿಡಿ' ಎಂದರು. ನಾನೇನಾದರು ತಪ್ಪು ಹೇಳಿದೆನೆ? ಅನ್ನಿಸಿತು ಆ ಕ್ಷಣಕ್ಕೆ. 'ತಪ್ಪಾಯಿತೇನೋ?' ಎಂದೆ.
ಮರುಮಾತನಾಡದೆ ನನ್ನ ಕೈಗೆ ಒಂದು ವಸ್ತು ಕೊಟ್ಟರು. ಅದು ವೃದ್ಧರಿಗಾಗಿ ಸರಕಾರ ನಿಡುವ ಬಸ್ ಪಾಸ್. ' ವೃದ್ಧರ ಜೊತೆಗೊಬ್ಬರು ಬರಬಹುದು - ವೃದ್ಧರ ಯೋಗಕ್ಷೇಮ ನೋಡಿಕೊಳ್ಳಲು', ಎಂಬ ಸೌಲಭ್ಯವಿರುವ ಪಾಸ್ ಅದು. ಪ್ರತಿ ತಿಂಗಳು ಬಸ್ಸಿಗಾಗಿ ಐನೂರು ರುಪಾಯಿಯನ್ನೇಕೆ ಹಾಳು ಮಾಡಬೇಕು ಎಂದುಕೊಂಡು ಅ ಪ್ರೀತಿಯ ಮಗಳು ತಂದೆಯನ್ನು ತನ್ನ ಜೊತೆ ವೃಥಾ ಕರೆತರುತ್ತಿದ್ದಳು.
ಅಲ್ಲಿಗೆ ಅರ್ಥವಾಯಿತಲ್ಲ ಪ್ರೀತಿಯ ಹಿಂದಿನ ಹುನ್ನಾರ....!
' ದಯವಿಟ್ಟು ನಾನು ಈ ವಿಷಯವನ್ನು ಹೇಳಿದನೆಂದು ಆಕೆಗೆ ಹೇಳಬೇಡಿ. ತಿನ್ನೋ ಅನ್ನಕ್ಕೂ ತೊಂದರೆಯಾಗುತ್ತೆ' ಅಂದರು.
'ಆಯ್ತು' ಎಂದು ಹೇಳಿ ಅವರಿಂದ ಬೀಳ್ಕೊಂಡೆ.
ಯಾಕೋ ನನ್ನ ಕಣ್ಣಂಚಿನಲ್ಲೂ ನೀರು ಜಿನುಗಿತು.
[ ಓ ಮನಸೇ ಯಲ್ಲಿ ಪ್ರಕಟವಾಗಿತ್ತು]

No comments:

Post a Comment