Feb 7, 2009

ಸಮಾಧಿ ಹೋಟ್ಲು

ಪುಟ ೦೩
ರಾಮೇಗೌಡನ ಮನೆಗೂ ಭೇಟಿ ನೀಡಿ 'ಯಾವುದೇ ಕಾರಣಕ್ಕೂ ನೀವಿಲ್ಲಿಂದ ತೆರಳಬೇಡಿ. ನಾವು ನಿಮಗಾಗಿ ಹೋರಾಡುತ್ತೇವೆ. ಸರಕಾರದ ಬೂಟಾಟಿಕೆಯ ಮಾತಿಗೆ ಮರುಳಾಗಬೇಡಿ.' ಎಂದೇಳಿ ಒಂದಷ್ಟು ದಿನಸಿಯನ್ನೂ ಪಡೆದು ಹೋಗಿದ್ದರು. ಊರ ಹೈಕಳ ಬಾಯಲ್ಲೆಲ್ಲಾ ಕಾಣದ ಚೀನಾದ ಮಾವೋನ ಹೆಸರು, ನಕ್ಸಲ್ಬಾರಿ ಎಂಬ ಊರಿನ ಹೆಸರು ನಲಿಯಲಾರಂಭಿಸಿತು. ಅವಳ ಮಗ, ಇನ್ನೊಬ್ಬನ ತಂಗಿ, ಮಗದೊಬ್ಬರು ಕೂಡ ಅವರ ಗುಂಪಿಗೆ ಸೇರಿ ಬಂದೂಕಿನೊಡನೆ ಹಳ್ಳಿಗಳಲ್ಲಿ ಓಡಾಡುತ್ತಿದ್ದಾರಂತೆ ಎಂಬ ವಾರ್ತೆ ಕೇಳಿ ಬರುತ್ತಿತ್ತು. ರಾಮೇಗೌಡನ ಮಿತ್ರ ಪ್ರಕಾಶ ಕೂಡ ಅವರೊಡನೆ ಹೋಗಿದ್ದನ್ನು ಕೇಳಿ ವಿಚಲಿತಗೊಂಡಿದ್ದ. ಈ ಮಧ್ಯೆ ಆಗಾಗ ಕಾಡಿನ ನಡುಮಧ್ಯದಿಂದ ಗುಂಡಿನ ಮೊರೆತ ಕೇಳಿಬರುತ್ತಿತ್ತು. ಶತಮಾನಗಳಿಂದ ರಸ್ತೆ ಕಾಣದಿದ್ದ ಪ್ರದೇಶಗಳಲ್ಲೂ ಪೋಲಿಸಿನವರ ವಾಹನಗಳು ಓಡಾಡಲನುಕೂಲವಾಗುವಂತೆ ಮಣ್ಣಿನ ರಸ್ತೆಗಳು ಉಧ್ಭವವಾದವು. ಮೈಲಿಗಳಾಚೆಯ ಊರಲ್ಲಿ ಎರಡೂ ಕಡೆಯ ಜನರ ಹೆಣ ಬಿದ್ದ ಮೇಲೆ ಇನ್ನು ಈ ಉರಿನಲ್ಲಿ ಇರುವುದು ಸರಿಯಲ್ಲವೆಂಬ ಭಾವ ಬಂದು ಅಧಿಕಾರಿಗಳನ್ನು ಭೇಟಿಯಾದ. "ಎಲ್ಲಾ ಸೇರಿ ನಿನಗೆ ಎರಡು ಲಕ್ಷ ಪರಿಹಾರ " ಅಂದರು.
ಮನೆಗೆ ಬಂದು ಹೆಂಡತಿ, ತಂದೆಗೆ ವಿಷಯ ತಿಳಿಸಿದ. ತಂದೆಗೆ ಒಂದಷ್ಟು ಬೇಸರವಾದರೂ ವಾಸ್ತವವನ್ನು ಅರಿತು ಸರಿ ಎಂದರು. 'ಎಲ್ಲಿಗೆ ಹೋಗೋದು' ಎಂಬ ಪ್ರಶ್ನೆ ಮೂಡಿತು. ರಾಮೇಗೌಡನ ತಾತ ಆ ಕಾಲದಲ್ಲಿ ದೂರದ ದುಗ್ಗಳ್ಳಿ ಎಂಬಲ್ಲಿ ತೆಗೆದುಕೊಂಡಿದ್ದ ಮೂರೆಕೆರೆಯ ಜಮೀನಿನ ನೆನಪಾಯಿತು ರಾಮೇಗೌಡನ ತಂದೆಗೆ. "ಆ ಊರಿಗೆ ಹೋಗಿ ಬರುವ ದುಡ್ಡಿನಿಂದ ಇನ್ನೊಂದೆರಡು ಎಕರೆ ಜಮೀನು ತೆಗೆದುಕೊಂಡು ವ್ಯವಸಾಯ ಆರಂಭಿಸೋಣ "ಎಂದರು ತಂದೆ. ಇವನೂ ಒಪ್ಪಿದ. ಎಲ್ಲರ ಕೈದಾಟಿ ರಾಮೇಗೌಡನ ಕೈಗೆ ಒಂದೂವರೆ ಲಕ್ಷ ಬಂತು. ಹೋಗುವ ಮುನ್ನ ತಾಯಿಯ ಸಮಾಧಿಯ ಬಳಿ ನಿಂತವನಿಗೆ ಅಳು ತಡೆಯಲಾಗಲಿಲ್ಲ. ಸುತ್ತಮುತ್ತ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಒಂದಷ್ಟು ನೆಲ್ಲಿ ಕಿತ್ತುಕೊಂಡು ಜೇಬಿಗಿಳಿಸಿದ.

ಕಾಲಿಟ್ಟಲ್ಲೆಲ್ಲಾ ಹಸಿರೇ ಕಂಡವನಿಗೆ ಅಲ್ಲೊಂದಿಲೊಂದು ಮರವಿರುವ ದುಗ್ಗಳ್ಳಿ ಮರುಭುಮಿಯಂತೆಯೇ ಕಂಡಿತ್ತು.ನಿಧಾನಕ್ಕೆ ಆ ಭಾಗದ ಹವಾಮಾನಕ್ಕೆ ಆರಂಭ ಪದ್ಧತಿಗೆ ಹೊಂದಿಕೊಂಡರು. ಘಟ್ಟದ ಹಸಿರು ರಕ್ತದಿಂದ ತೊಯ್ದುಹೊಗುತ್ತಿದ್ದುದನ್ನು ಕೇಳಿ ಬೇಸರಗೊಳ್ಳುತ್ತಿದ್ದ. ರಾಮೇಗೌಡನ ಊರಿನ ಬಹುತೇಕ ಮಂದಿ ಸಿಕ್ಕಷ್ಟು ಪರಿಹಾರ ತೆಗೆದುಕೊಂಡು ಊರು ತೊರೆದಿದ್ದರು. ಪ್ರಕಾಶನ ಛಿದ್ರಗೊಂಡ ದೇಹವನ್ನು ಪತ್ರಿಕೆಯಲ್ಲಿ ನೋಡಿದ ಮೇಲೆ ಮನಸ್ಸು ಅಸ್ತವ್ಯಸ್ತಗೊಂಡಿತ್ತು.
ದುಗ್ಗಳ್ಳಿಗೆ ಬಂದು ಎರಡು ವರ್ಷವಾಗಿತ್ತು. ಸಂಬಂಧಿಕರೊಬ್ಬರು ಸತ್ತಿದ್ದ ಕಾರಣ ಘಟ್ಟಕ್ಕೆ ಹೋಗಬೇಕಾಗಿ ಬಂತು. ಅವನ ಊರಿನಿಂದ ಇಪ್ಪತ್ತು ಮೈಲಿಯೀಚೆಯ ಊರದು. ಪಟ್ಟಣಕ್ಕೆ ಬಂದು ಘಟ್ಟಕ್ಕೆ ಹೋಗುವ ಬಸ್ಸನೇರಿದ. ಊರು ತಲುಪುವ ಮೊದಲು ಮೂರೂ ಬಾರಿ ಎಸ್.ಟಿ.ಎಫ ನವರು ಬಸ್ಸು ತಡೆದು ಎಲ್ಲರನ್ನೂ ಎಲ್ಲವನ್ನು ಪರೀಕ್ಷಿಸಿದ್ದರು, ಹೈರಾಣಾಗಿದ್ದ. ಸಾವಿನ ಕಾರ್ಯವೆಲ್ಲಾ ಮುಗಿಯುವ ವೇಳೆಗೆ ಸಂಜೆಯಾಗಿತ್ತು. ತಾಯಿಯ ಸಮಾಧಿಯ ಬಳಿ ಹೋಗುವ ಮನಸ್ಸಾಯಿತು. 'ಉರಲ್ಲ್ಯಾರಾದರೂ ಇದ್ದಾರಾ ಹೇಗೆ?' ಎಂದು ವಿಚಾರಿಸಿದ. ' ಹೋಗೋದು ಬೇಡ ಸರಿಯಿಲ್ಲ ಅಲ್ಲಿ ಈಗ' ಎಂದರು. ಅವರ ಮಾತನ್ನು ಕೇಳಿಸಿಕೊಳ್ಳದವನಂತೆ ಊರಿನ ಬಸ್ಸಿಡಿದ. ಕಲ್ಲು ಜಲ್ಲಿ ಇದ್ದ ಜಾಗದಲ್ಲಿ ನುಣುಪಾದ ರಸ್ತೆ ಮೈ ಚಾಚಿಕೊಂಡಿತ್ತು. ಉರ ಜನರನ್ನೆಲ್ಲಾ ಸ್ಥಳಾಂತರಿಸಿದ ಮೇಲೆ ಇಷ್ಟು ಚೆಂದದ ರಸ್ತೆಯಾಕೋ ಅಂದುಕೊಂಡ.
ಉರಿಗಿನ್ನೊಂದು ಮೈಲಿಯಿರುವಾಗ " ನಿಸರ್ಗ ಪ್ರವಾಸೋದ್ಯಮ ವಲಯಕ್ಕೆ ಸ್ವಾಗತ " ಎಂಬ ಬೋರ್ಡು ಕಾಣಿಸಿತು...
[ಮುಂದುವರೆಯುವುದು...]

No comments:

Post a Comment