ಊರ ಹೊರಗಿದ್ದ ಕಾಲೋನಿಯ ಆಚೆ ಊರಂಚಿನಲ್ಲಿ ಅಲ್ಲೊಂದಿಲ್ಲೊಂದಂತೆ ಇದ್ದ ಮನೆ ಖರೀದಿಸಿ ಆವಾಗಿವಾಗ ಬರುವುದಕ್ಕೆ ಶುರುಮಾಡಿ ಕೆಲವು ತಿಂಗಳುಗಳಾಗಿತ್ತು. ಮನೆಯಂಗಳದಲ್ಲಿ ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದಾಗ ಆ ವ್ಯಕ್ತಿ ಬಂದರು. ಗರಿಗರಿಯಾದ ಹೊಸ ಬಟ್ಟೆ ತೊಟ್ಟುಕೊಂಡಿದ್ದರು. ಅವರ ಅಣ್ಣನ ಮಗನದು ಮದುವೆ – ಕೊಳ್ಳೇಗಾಲದಲ್ಲಿ. ಊರಿಂದಾಗ ಬಸ್ಸು ಹೊರಡುವುದರಲ್ಲಿತ್ತು. ಅಷ್ಟು ದೂರದ ಮದುವೆಗೆ ಕರೆಯಲು ಬಂದಿರಲಿಲ್ಲ. ಮುಂದಿನ ಭಾನುವಾರ ಇಲ್ಲೇ ಇನ್ನೂರು ಅಡಿ ದೂರದಲ್ಲಿ ಅವರ ಅಣ್ಣ ಕಟ್ಟಿಸಿರುವ ಹೊಸ ಮನೆಯೊಂದರ ಮುಂದೆ ಕರ್ನರೆ – ಬೀಗರ ಊಟಕ್ಕೆ ಹೇಳಿ ಹೋಗಲು ಬಂದಿದ್ದರು. ಮುಂದಿನ ವಾರ ಊರಿಗೆ ಬಂದರೆ ಖಂಡಿತ ಬರ್ತೀನಿ ಅಂತೇಳಿದೆ.
ಕರ್ನೆರೆಯ ದಿನ ಹನ್ನೊಂದು ಘಂಟೆಯಷ್ಟೊತ್ತಿಗೆ ಮತ್ತೆ ಬಂದು ನೆನಪಿಸಿದರು. ಬರ್ತೀನಿ ಬಿಡಿ ನೆನಪಿತ್ತು ಅಂತೇಳಿದೆ. ಮಧ್ಯಾಹ್ನದ ಮೇಲೆ ಒಂದಷ್ಟು ಬೇರೆ ಕೆಲಸವಿತ್ತು, ಹಂಗಾಗಿ ಒಂದೂಕಾಲರಷ್ಟೊತ್ತಿಗೆ ಕರ್ನರೆಗೆ ಹೋಗಿ ಊಟ ಮಾಡಿಕೊಂಡು ಹೊರಟುಬಿಡುವ ಎಂದುಕೊಂಡೆ. ಅವರ ಮನೆಯ ಬಳಿ ಹೋದೆ, ಇನ್ನೂ ಮುದ್ದೆ ತಿರುವುತ್ತಿದ್ದದ್ದು ರಸ್ತೆಯಿಂದಲೇ ಕಾಣಿಸುತ್ತಿತ್ತು. ಊಟಕ್ಕಿನ್ನೂ ಕುಳಿತಿರಲಿಲ್ಲ. ಹಂಗೇ ಕಣ್ಣಾಡಿಸಿದೆ. ನನ್ನನ್ನು ಎರಡೆರಡು ಸಲ ಕರೆದು ಹೋಗಿದ್ದವರೂ ಕಾಣಿಸಲಿಲ್ಲ. ಅವರನ್ನು ಬಿಟ್ಟರೆ ಅಲ್ಲಿದ್ದ ಇನ್ಯಾರ ಮುಖ ಪರಿಚಯವೂ ಇಲ್ಲ. ಏನೋ ಊಟ ಈಗಾಗಲೇ ಶುರುವಾಗಿಬಿಟ್ಟಿದ್ದರೆ ಹೋಗಿ ಕುಳಿತು ಊಟ ಮಾಡಿಕೊಂಡು ಹೊರಡಬಹುದಿತ್ತು. ಅವರಲ್ಲಿ ಇದ್ದರೋ ಇಲ್ಲವೋ ಅನ್ನೋದು ಮುಖ್ಯವಾಗಿರಲಿಲ್ಲ! ಈಗಲ್ಲಿ ಹೋಗಿ ಶಾಮಿಯಾನದ ಕೆಳಗೆ ಕೂರಬೇಕು. ಇದ್ಯಾರು ಅಂತ ಗಮನಿಸೋ ಕುತೂಹಲದ ಕಣ್ಣುಗಳಿಗೆ ಆಹಾರವಾಗಬೇಕು. ಯಾಕ್ ಬೇಕಪ್ಪ ಸಾವಾಸ ಅಂತ ಹಂಗೇ ಕಾರಿಂದಿಳಿದು ಹೊರಟುಬಿಟ್ಟೆ.