May 5, 2017

ಕೆಂಪು ದೀಪದ ಕೆಳಗೆ

ಸಾಂದರ್ಭಿಕ ಚಿತ್ರ 
ರಘು ಮಾಗಡಿ (ನೇತೇನಹಳ್ಳಿ)
ಕಟುಕನಂಗಡಿಯ ಮುಂದೆ
ಜೋತು ಬಿದ್ದ ಪ್ರಾಣಿಯಂತೆ
ಅರೆ ನಗ್ನ ದೇಹ
ಯಾರೋ ಬಗೆದು ತಿನ್ನುವವರು
ಯಾರೋ ಜಗಿಯುವವರು
ತಿಂದು ತೇಗಿದವರು
ಬೀಸಾಡಿ ಹೋದ ನೋಟಿನ ಕಂತೆ
ಅವಳು ಕುಣಿಯಬೇಕು ಎಣಿಸುವವರ ತಾಳಕ್ಕೆ....
ರಾಜಾಜ್ನೆಯೆಂಬಂತೆ ತಲೆಬಾಗಿ
ಕರಾರುಪತ್ರದ ಆದೇಶದಂತೆ
ದೇಹದ ಹರಾಜಿಡಬೇಕು
ವ್ಯಾಪಾರದ ಸರಕು ಮಾಡಿ
ಬಲಿ ಕೊಡುವ ಶೃಂಗಾರದ
ಆ ಕುರಿಯ ಬಲಿ ಒಂದೇ ಸಲ
ನಿತ್ಯ ಶೃಂಗಾರದ ನನ್ನ ಬಲಿ
ನಿತ್ಯ ನಿರಂತರ...

ಸಾಕಾಗಿದೆ ದೀಪದಡಿಯ ಕತ್ತಲಿನ ಜೀವನ
ಅಳುವಾಗ ನಕ್ಕಂತೆ ನಗುವಾಗಲೂ ಅಳುತ್ತ
ನಲುಗುತಿದೆ ಅವಳ ಜೀವ ಬಾಡುತಿದೆ ಬದುಕು
ಸುತ್ತಲೂ ಕತ್ತಲೆ ಒಳಗೂ ಹೊರಗೂ
ನಿತ್ಯ ಸತ್ಯ ಜೀವನ...

No comments:

Post a Comment